

ಹಾವೇರಿ: ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ವಕೀಲ ಸದಾಶಿವರೆಡ್ಡಿ ಅವರ ಕಚೇರಿಗೆ ಹೋಗಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಹಾವೇರಿ ಜಿಲ್ಲಾ ವಕೀಲರ ಸಂಘದಿಂದ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಬಳಿ ಮಂಗಳವಾರ ಮೌನ ಪ್ರತಿಭಟನೆ ಮಾಡಲಾಯಿತು.
ವಕೀಲರು ಕೈಗೆ ಕೆಂಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ಬಳಿಕ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೇಸ್ ಕೊಡುವ ನೆಪದಲ್ಲಿ ಏ.16ರಂದು ಸದಾಶಿವರೆಡ್ಡಿ ಅವರ ಕಚೇರಿಗೆ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬ ಫೈಬರ್ ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ. ಇನ್ನೊಬ್ಬ ಹಲ್ಲೆಯ ದೃಶ್ಯ ಸೆರೆ ಹಿಡಿದಿದ್ದಾನೆ. ನಂತರ ಜೀವ ಬೆದರಿಕೆ ಹಾಕಿದ್ದಾರೆ. ಇವರಿಬ್ಬರ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು. ನಿಸ್ಪಕ್ಷಪಾತವಾಗಿ ತನಿಖೆ ಕೈಗೊಂಡು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಚ್ ಜತ್ತಿ, ಉಪಾಧ್ಯಕ್ಷ ಸಿ.ಪಿ ಜಾವಗಲ್ಲ, ಕಾರ್ಯದರ್ಶಿ ಪಿ.ಎಸ್ ಹೆಬ್ಬಾಳ, ಎಂ.ಎಲ್ ಸೊನ್ನದ, ಕವಿತಾ ಕಿತ್ತೂರ, ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.