

ಹಾವೇರಿ: ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡದಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸಬೇಕಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಸಿ.ನಿಡಗುಂದಿ ಸಲಹೆ ನೀಡಿದರು.
ನಗರದ ವಕೀಲರ ಭವನದಲ್ಲಿ ಇತ್ತೀಚೆಗೆ ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ವಕೀಲರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅನಾರೋಗ್ಯ ಸಮಸ್ಯೆಯಿಂದ ಹೊರಬರಲು ನಿತ್ಯ ವ್ಯಾಯಮ ಮತ್ತು ಉತ್ತಮ ಆಹಾರ ಕ್ರಮ ಅಳವಡಿಸಿಕೊಳ್ಳಬೇಖು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಮಾತನಾಡಿ, ಕೆಲಸದ ಒತ್ತಡದಿಂದ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಪರಿಣಾಮ ನಾವು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರಿಂದ ಹೊರಬರಬೇಕಾದರೆ ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಸಿ.ಪಿ.ಜಾವಗಲ್ಲ, ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಆಡಳಿತ ಮಂಡಳಿ ಸದಸ್ಯರಾದ ಕವಿತಾ ಕಿತ್ತೂರ, ಎಂ.ಎಲ್.ಸೊನ್ನದ, ಆರ್.ಎಚ್.ತಂಗೊಡರ, ಸಿ.ಎಸ್.ಹಿರೇಮಠ, ಎಂ.ಎಂ.ರಜಾಕನವರ, ಬಿ.ಎಸ್.ಅಂಬ್ಲೇರ, ಎನ್.ಎಸ್.ಕಾಳೆ, ಇತರರಿದ್ದರು.