

ಹಾವೇರಿ: ಲಿಂಗಾಂಗ ಸಾಮರಸ್ಯ ಬೋಧಿಸುವುದೇ ಶಿವಾದ್ವೈತ ಸಿದ್ಧಾಂತದ ಗುರಿಯಾಗಿದೆ. ಶಿವಾದ್ವೈತ ಸಿದ್ಧಾಂತದ ವಿಚಾರಗಳನ್ನು ಮನವರಿಕೆ ಮಾಡಿಕೊಡುವುದೇ ಸಿದ್ಧಾಂತ ಶಿಖಾಮಣಿಯ ಮೂಲ ಧ್ಯೇಯ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಯಾಲಕ್ಕಿ ಓಣಿಯ ಶ್ರೀ ಹರಸೂರು ಬಣ್ಣದ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಮಹಾನ್ ಗ್ರಂಥ ಸಿದ್ಧಾಂತ ಶಿಖಾಮಣಿಯಾಗಿದೆ. ನೀವೆಲ್ಲರೂ ಸಿದ್ಧಾಂತ ಶಿಖಾಮಣಿ ಕೇವಲ ಪಠಣ ಪಾರಾಯಣಕ್ಕೆ ಸೀಮಿತ ಮಾಡದೇ ಶಿಖಾಮಣಿಯ ಅರ್ಥವನ್ನು ತಿಳಿದುಕೊಂಡು ನಮ್ಮ ಮುಂದಿನ ಯುವ ಪೀಳಿಗೆಗಳಿಗೆ ಬೋಧನೆ ಮಾಡುವುದರ ಜತೆಗೆ ನಮ್ಮ ಧರ್ಮ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ.
ಪವಿತ್ರವಾದ ಮಾನವ ಜನ್ಮವನ್ನು, ಮಂತ್ರ ಶರೀರವನ್ನಾಗಿ ಮಾಡಿಕೊಂಡು, ಪ್ರತಿನಿತ್ಯ ಧ್ಯಾನ ಯೋಗ ಇಷ್ಟಲಿಂಗ ಪೂಜೆಯ ಜತೆಗೆ ಮನಸುದ್ದಿಗಾಗಿ ಸಿದ್ಧಾಂತ ಶಿಖಾಮಣಿ ಅಂತಹ ಗ್ರಂಥಗಳ ಜ್ಞಾನ ಅವಶ್ಯವಿದೆ ಎಂದರು.
ಜ್ಞಾನ ವಿಕಾಸಕ್ಕೆ ಸಾಧನೆ ಮತ್ತು ಪ್ರಯತ್ನ ಅಗತ್ಯ. ಜೀವ ಶಿವನಾಗಲು, ಅಂಗ ಲಿಂಗವಾಗಲು ದೇಹ ದೇವಾಲಯವಾಗುವ ಜ್ಞಾನವನ್ನು ಸಿದ್ಧಾಂತ ಶಿಖಾಮಣಿ ಗ್ರಂಥದಿಂದ ತಿಳಿಯಲು ಸಾಧ್ಯ. ಆಧ್ಯಾತ್ಮ ಸಾಧಕರಿಗೆ ಸಿದ್ಧಾಂತ ಶಿಖಾಮಣಿ ಅಮೂಲ್ಯ ಕೊಡುಗೆ ಕೊಟ್ಟಿದೆ ಎಂದು ಎಂದು ಹೇಳಿದರು.
ಗುರುಪಾದ ದೇವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಣ್ಣದ ಮಠದ ಅಭಿನವ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕವಿತಾ ಹಿರೇಮಠ, ಅನುಪಮಾ ಹಿರೇಮಠ ಮಾತನಾಡಿದರು.
ಶಶಿಕಲಾ ಮಠದ, ಶಾಂತಕ್ಕ ಮಠದ, ಲಲಿತಾ ಕರೀಗೌಡ್ರ, ಸೌಭಾಗ್ಯ ಹಿರೇಮಠ, ಪೂರ್ಣಿಮಾ ಮರಡುರಮಠ, ವಿಜಯಲಕ್ಷ್ಮೀ ಹರ್ಲಾಪುರ, ಶೈಲಜಾ ಮಳಶಂಕರಿಮಠ, ಚೈತ್ರ ಹೊಸಮಠ, ರಚಿತಾ ಮರಡೂರಮಠ, ಮಂಜುಳಾ ಚಿಂದಿ, ಸುಮಾ ಕಾಡದೇವರ ಮಠ, ಉಮಾ ಬಾರಂಗಿ, ಅನುರಾಧ ಜಾಗಟಗೇರಿ, ಗಿರಿಜಾ ಸಾತೇನಹಳ್ಳಿ, ಶಾಂತಾ ಬೆಳಕೇರಿ, ಪುಷ್ಪಾ ಹೊಸೂರ, ವಿಜಯಲಕ್ಷ್ಮೀ ಚಿರಂತಿಮಠ, ಇತರರು ಇದ್ದರು.