ಬ್ಯಾಂಕುಗಳು ಖಾಸಗಿ ಬ್ಯಾಂಕುಗಳಿಗೆ ಪೈಪೋಟಿ ನೀಡಬೇಕು; ಬ್ಯಾಂಕ್ ಅಧಿಕಾರಿ, ಸಿಬ್ಬಂದಿಗೆ ಸಂಸದ ಬೊಮ್ಮಾಯಿ ಸೂಚನೆ

26 HVR 4 A
Published on

ಹಾವೇರಿ: ಬ್ರಿಟಿಷರ ಕಾಲದ ಮನಸ್ಥಿತಿ ಕೈಬಿಟ್ಟು ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಖಾಸಗಿ ಬ್ಯಾಂಕುಗಳಿಗೆ ಪೈಪೋಟಿ ನೀಡುವ ಮೂಲಕ ಬಡವರ ಪರವಾಗಿ ಕೆಲಸ ಮಾಡಬೇಕು. ರೈತಸ್ನೇಹಿಯಾಗಿ, ಜನಸ್ನೇಹಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕುಗಳು ರೈತರು, ಯುವಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸಕಾಲಕ್ಕೆ ಸಾಲ ನೀಡಬೇಕು. ಬ್ಯಾಂಕುಗಳು ಬಡವರ ಪರವಾಗಿವೆ ಎಂಬ ವಿಶ್ವಾಸ ಮೂಡಿಸಬೇಕು. ಬಡವರು ಬ್ಯಾಂಕಿಗೆ ಬಂದಾಗ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಕೆಲಸ ಮಾಡಿಕೊಡಬೇಕು ಎಂದರು.
ಜನಧನ, ವಿಶ್ವಕರ್ಮ, ಶಿಕ್ಷಣ ಸಾಲ, ಪಿಎಂ ಸ್ವನಿಧಿ, ಮುದ್ರಾ ಯೋಜನೆಗಳು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ. ಈ ಶಿಬಿರಗಳಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತೇನೆ. ಸ್ಥಳೀಯವಾಗಿ ಸ್ವಯಂ ಉದ್ಯೋಗ ರೂಪಿಸಲು ಇದು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಅಗತ್ಯ ಮಾರ್ಗದರ್ಶನ ನೀಡಬೇಕೆಂದು ನಿರ್ದೇಶಿಸಿದರು.
ಸಿ.ಡಿ. ರೆಷಿಯೋ ಸರಿ ಇಲ್ಲದ, ಸರಿಯಾಗಿ ಕಾರ್ಯನಿರ್ವಹಿಸದ ಬ್ಯಾಂಕುಗಳು ನಮ್ಮ ಜಿಲ್ಲೆಗೆ ಬೇಡ. ಕರ್ನಾಟಕ ಬ್ಯಾಂಕಿನ ಸಿ.ಡಿ. ರೇಷಿಯೋ ಕಡಿಮೆ ಇದ್ದು, ಡಿಸೆಂಬರ್ ವೇಳೆಗೆ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತೆರೆಯಲು ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದರ ಮೊದಲ ಭಾಗವಾಗಿ ಪ್ರಾದೇಶಿಕ ಕಚೇರಿ ಆರಂಭವಾಗಲಿದೆ. ಕೆಸಿಸಿ ಬ್ಯಾಂಕ್ ಇರುವುದೇ ರೈತರಿಗಾಗಿ, ಕಾರಣ ರೈತರಿಗೆ ಹೆಚ್ಚಿನ ಸಾಲ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ನಬಾರ್ಡ್ ಡಿಡಿಎಂ ರಂಗನಾಥ ಎಸ್., ಆರ್‌ಬಿಐ ಎಲ್‌ಡಿಒ ಮೋನಿರಾಜ ಬ್ರಹ್ಮ, ಕೆವಿಜಿ ಬ್ಯಾಂಕ್‌ನ ಸೋಮಶೇಖರ ನಾಯರಿ, ಕೆನರಾ ಬ್ಯಾಂಕ್‌ನ ಎಂ.ಸಂಜೀವಕುಮಾರ, ಇತರರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಅಣ್ಣಯ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net