

ಹಾವೇರಿ: ಲಂಬಾಣಿ ಸಮುದಾಯ ತಮ್ಮದೇ ಆದ ಉಡುಪು, ನೃತ್ಯ ಹಾಗೂ ಸಂಪ್ರದಾಯದ ಮೂಲಕ ವಿಶಿಷ್ಟವಾದ ಆಚರಣೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಬಹುಸಂಖ್ಯಾತ ಸಮುದಾಯದವರು ಪ್ರೀತಿ, ವಿಶ್ವಾಸದಿಂದ ಕಂಡು ಈ ಪುರಾತನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಬಂಜಾರ ಸಮುದಾಯದ ಸಾಲೂರಮಠದ ಸೈನಾ ಭಗತ್ ಮಹಾರಾಜರು ಕೋರಿದರು.
ನಗರದ ಜಿಲ್ಲಾ ಗುರು ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಿಕ ಬಂಜಾರ ಸಾಂಸ್ಕೃತಿಕ ಕಲಾ ತಂಡದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬಂಜಾರ ಸಮುದಾಯದವರು ಉತ್ತಮ ಕಲಾವಿದರು. ಹಾಡು, ನೃತ್ಯ ಬಲ್ಲವರು. ರಕ್ತಗತವಾಗಿ ಕಲೆ ಅವರೊಂದಿಗೆ ಬೇರೂರಿದೆ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಇದಕ್ಕೂ ಮೊದಲು ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಗುರುಭವನವರೆಗೆ ಲಂಬಾಣಿ ಸಮುದಾಯದ ಹಿರಿಯರು, ಮಹಿಳೆಯರು ಮೆರವಣಿಗೆ ನಡೆಸಿದರು.
ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಗೀತಾಬಾಯಿ ಲಮಾಣಿ, ರಮೇಶ ಲಮಾಣಿ, ಆರ್.ಬಿ.ಪಾಟೀಲ, ಪ್ರಭಾಕರ ತಳವಾರ, ಬಸವರಾಜ ಸಾವಕ್ಕನವರ, ಬಡವೆಪ್ಪ ಆನವಟ್ಟಿ, ಸಂಜಯಗಾಂಧಿ ಸಂಜೀವಣ್ಣನವರ, ಚೇತನರಾಜ ಎನ್., ಯಲ್ಲಪ್ಪ ಮರಾಠಿ, ಯೂಸೂಫ್ ಸೈಕಲಗಾರ, ಅನಿತಾ ಹರನಗಿರಿ, ಇತರರಿದ್ದರು.