

ಹಾವೇರಿ: ಆರ್‌ಸಿಬಿ ಗೆಲುವಿನ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆಗಾರನಾಗಿದ್ದು, ತನ್ನ ತಪ್ಪು ಮುಚ್ಚಿ ಹಾಕಲು ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ 11 ಜನ ಅಮಾಯಕರು ಪ್ರಾಣ ಕಳೆದುಕೊಂಡರು. ಈ ಪ್ರಕರಣದ ಸಂಪೂರ್ಣ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ, ಗೃಹ ಸಚಿವ ಪರಮೇಶ್ವರ ರಾಜೀನಾಮೆ ಕೊಡಬೇಕು. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು. ಮೃತ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು. ಜತೆಗೆ ಸಂಪೂರ್ಣ ಘಟನೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು, ಪೊಲೀಸರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಡೇಶ ಕಳ್ಳೇರ, ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪರಮೇಶಪ್ಪ ಮೇಗಳಮನಿ, ಗಿರೀಶ ತುಪ್ಪದ, ವೆಂಕಟೇಶ ನಾರಾಯಣಿ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಭು ಹಿಟ್ನಳ್ಳಿ, ಶಿವಯೋಗಿ ಹುಲಿಕಂತಿಮಠ, ವಿಜಯಕುಮಾರ ಕೂಡ್ಲಪ್ಪನವರ, ಶಂಭು ಹತ್ತಿ, ಮಂಜು ಮಲಗೋಡ, ಪ್ರಕಾಶ ಉಜ್ಜಿನಿಕೊಪ್ಪ, ಗಿರೀಶ ಶೆಟ್ಟರ್, ಜಗದೀಶ ಕನವಳ್ಳಿ, ನಾಗರಾಜ ಹಾರಿಗೋಲು, ಬಸವರಾಜ ಹಾಲಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.