ಹಾವೇರಿ: ಹಾವೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ರಾಜಾರೋಷವಾಗಿ ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಡೆದಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಖಾರಿಗಳು, ನಗರಸಭೆ, ಇತರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ದಿವ್ಯ ನಿರ್ಲಕ್ಷೃ ವಹಿಸಿದ್ದಾರೆ. ಹಬ್ಬದ ಮುನ್ನಾದಿನ ಎಲ್ಲ ಪಿಒಪಿ ಬಯಲಿಗೆ ಬರಲಿದ್ದು, ಕೂಡಲೇ ದಾಳಿ ನಡೆಸಿ ವಶಕ್ಕೆ ಪಡೆಯಬೇಕು ಎಂದು ಹತ್ತಿಮತ್ತೂರ ಗ್ರಾಮದ ಮಣ್ಣಿನ ಗಣೇಶ ಮೂರ್ತಿಗಳ ತಯಾರಕ ಸಂಜೀವ ಅತ್ತಿಮತ್ತೂರ ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಸೋಮವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಹಾವೇರಿ ಶಹರ, ತಾಲೂಕಿನ ಯತ್ನಳ್ಳಿ ಗ್ರಾಮ, ರಾಣೆಬೆನ್ನೂರ, ಬಂಕಾಪುರ, ಶಿಗ್ಗಾಂವಿ, ಬ್ಯಾಡಗಿ, ಸೇರಿ ಎಲ್ಲೆಡೆ ಪಿಒಪಿ ಮಾರಾಟ ಜೋರಾಗಿ ನಡೆದಿದೆ. ಹಬ್ಬದ ಮುನ್ನಾದಿನ ಮತ್ತು ಹಬ್ಬದಂದು ಎಲ್ಲವೂ ಹೊರಗೆ ಬರಲಿವೆ. ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಿ. ಪರಿಸರ ನಾಶ ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ.