ಕಾಟಾಚಾರಕ್ಕೆ ಬಾಲ ಕಾರ್ಮಿಕರ ತಪಾಸಣೆ ಸಲ್ಲದು; ಅಧಿಕಾರಿಗಳು ಕಡ್ಡಾಯವಾಗಿ ದಾಳಿಯಲ್ಲಿ ಭಾಗವಹಿಸಬೇಕು; ಕಾರ್ಯಪಡೆ ಸಭೆಯಲ್ಲಿ ಡಿಸಿ ಸೂಚನೆ

18 HVR 7
Published on

ಹಾವೇರಿ: ಬಾಲ ಕಾರ್ಮಿಕ ನಿರ್ಮೂಲನೆ ಕಾಟಾಚಾರದ ಕಾರ್ಯಕ್ರಮವಾಗಬಾರದು. ಕಾರ್ಯಪಡೆಯ ನಿಯೋಜಿತ ಅಧಿಕಾರಿಗಳು ಕಡ್ಡಾಯವಾಗಿ ದಾಳಿಗಳಲ್ಲಿ ಭಾಗವಹಿಸಿ, ಮಕ್ಕಳನ್ನು ದುಡಿಮೆಗೆ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ದಾಖಲಿಸಬೇಕು. ಮಕ್ಕಳನ್ನು ರಕ್ಷಣೆ ಮಾಡಿ ಮುಖ್ಯ ವಾಹಿನಿಗೆ ತರಬೇಕೆಂದು ಜಿಲ್ಲಾಧಿಕಾರಿ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜಿಲ್ಲಾ ಕಾರ್ಯಪಡೆಯ ಅಧ್ಯಕ್ಷ ರಘುನಂದನ ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣಲ್ಲಿ ಬುಧವಾರ ಬಾಲ ಕಾರ್ಮಿಕ ನಿರ್ಮೂಲನೆ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಪೊಲೀಸ್, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಮಕ್ಕಳ ಕಲ್ಯಾಣ, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ 11 ಇಲಾಖೆಗಳ ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ಸರ್ಕಾರ ನಿಯೋಜಿಸಿದೆ. ಪತ್ತೆಯಾದ ಮಕ್ಕಳ ಮನೆಗೆ ತೆರಳಿ ಪಾಲಕರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಅವಲೋಕಿಸಿ, ಮಕ್ಕಳಿಗೆ ಶಿಕ್ಷಣ, ಕೌಶಲ್ಯ ತರಬೇತಿ ಇನ್ನಿತರ ಕಾರ್ಯಕ್ರಮಗಳ ಮೂಲಕ ಮುಖ್ಯ ವಾಹಿನಿಗೆ ತರುವ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
ನವಂಬರ್ 14ರಿಂದ ಬಾಲ ಕಾರ್ಮಿಕ ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಆಯೋಜಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಜಿಲ್ಲೆಯ 223 ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕ ನಿರ್ಮೂಲನೆ ಕುರಿತಂತೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು, ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ ಹಾಗೂ ಕಾರ್ಯಪಡೆಯ ವಿವಿಧ ಇಲಾಖೆಗಳ ಅಧಿಕಾರಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹೋಬಳಿ ಮಟ್ಟದಲ್ಲಿ ಕಾರ್ಯಪಡೆ
ಸರ್ಕಾರದ ಹೊಸ ಆದೇಶದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನಾ ಕಾರ್ಯಪಡೆ ಜತೆಗೆ ಹೋಬಳಿ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಲಾಗಿದೆ. ಹೋಬಳಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ಪ್ರತಿ ತಂಡದಿಂದ ತಿಂಗಳಿಗೆ ಹದಿನೈದು ತಪಾಸಣೆ ನಡೆಸಬೇಕು ಎಂದು ಡಿಸಿ ಸೂಚಿಸಿದರು.
ಡ್ರಾಪ್‌ಔಟ್ ಮಾಹಿತಿ ಕೊಡಿ
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 505 ಮಕ್ಕಳ ಪೈಕಿ 421 ಮಕ್ಕಳ ಪತ್ತೆಮಾಡಿ ಶಾಲೆಗೆ ಸೇರಿಸಿರುವ ಮಾಹಿತಿ ನೀಡಿದ್ದೀರಿ. ಉಳಿದ 84 ಮಕ್ಕಳು ಎಲ್ಲಿದ್ದಾರೆ? ವಲಸೆ ಹೋಗಿದ್ದಾರಾ ಎಂಬ ಪ್ರತಿ ಮಗುವಿನ ಮಾಹಿತಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ಡಿಸಿ ಸೂಚಿಸಿದರು.
ನೋಟೀಸ್ ಜಾರಿಗೊಳಿಸಿ
ಕಾರ್ಯಪಡೆ ಸಮಿತಿ ಸಭೆಗೆ ಗೈರಾಗಿರುವ ಅಧಿಕಾರಿ ಸದಸ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿ ಹಾಗೂ ಸತತವಾಗಿ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆಗೆ ಗೈರಾಗಿರುವ ಅಧಿಕಾರಿಗಳ ಮಾಹಿತಿ ಸಲ್ಲಿಸಿ ಎಂದು ಕಾರ್ಮಿಕ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net