

ಹಾವೇರಿ: ತಾಲೂಕಿನ ಸಂಗೂರ- ದಿಡಗೂರ ಗ್ರಾಮದ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ಇಲ್ಲಿನ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಸಂಗೂರನಿಂದ ದಿಡಗೂರ, ಕಲಕೇರಿ, ಬ್ಯಾಗವಾದಿ, ಕೂಸನೂರು ಮಾರ್ಗವಾಗಿ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ದಿಡಗೂರ ಪ್ಲಾಟ್‌ನಿಂದ ದಿಡಗೂರ ಬಸ್ ನಿಲ್ದಾಣದವರೆಗೆ ಸುಮಾರು 200 ಮೀಟರ್ ರಸ್ತೆ ಭಾರೀ ಹದಗೆಟ್ಟಿದೆ. ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ.
ಎರಡು, ಮೂರು ವರ್ಷಗಳಿಂದ ಇದೇ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಗಮನ ಹರಿಸುತ್ತಿಲ್ಲ. ಮಳೆ ಬಂದಾಗ ಅಂತೂ ವಾಹನ ಸವಾರರು ಆತಂಕದಲ್ಲೇ ವಾಹನ ಚಲಾಯಿಸಬೇಕಿದೆ. ಈ ಗುಂಡಿ ಬಿದ್ದ ರಸ್ತೆಯಲ್ಲಿ ಹಲವು ಅಪಘಾತಹಗಳು ಸಂಭವಿಸಿದ್ದು, ದೊಡ್ಡ ಅನಾಹುತ ಸಂಭವಿಸುವ ಮೊದಲೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ, ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರಾದ ಯೋಗೇಶ ಕಮ್ಮಾರ, ಮನೋಜ ಕಮ್ಮಾರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.