ಅತಿ ವೇಗ ಪತ್ತೆಗೆ ಸ್ಪೀಡ್ ರಡಾರ್ ಗನ್; ಸ್ಥಳದಲ್ಲೇ ಬೀಳುತ್ತೆ ಸಾವಿರ ರೂ. ದಂಡ

18 HVR 6 B
Published on

ಹಾವೇರಿ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅತಿ ವೇಗದ ಚಾಲನೆ ಹಾಗೂ ಅಪಘಾತ ತಡೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೊಸದಾಗಿ ಸ್ಪೀಡ್ ರಡಾರ್ ಗನ್(ಕ್ಯಾಮರಾ)ಗಳ ಬಳಕೆ ಮಾಡಲಾಗುತ್ತಿದೆ. ಪ್ರಾಯೋಗಿಕ ಬಳಕೆಯ ಎರಡು ದಿನಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಿಸಿ, ವಾಹನ ಸವಾರರಿಂದ ದಂಡ ವಸೂಲಿ ಮಾಡಿದ್ದಾರೆ.
ಇಲಾಖೆಯಿಂದ ಜಿಲ್ಲೆಗೆ ನಾಲ್ಕು ಕ್ಯಾಮರಾಗಳನ್ನು ಕೊಡಲಾಗಿದೆ. ಇವುಗಳ ಬಳಕೆಯಿಂದ ಪೊಲೀಸರು ಹಾವೇರಿ ಸಮೀಪದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹಾನಗಲ್ಲ, ಗುತ್ತಲ ರಾಜ್ಯ ಹೆದ್ದಾರಿ, ಮತ್ತಿತರ ಕಡೆಗಳಲ್ಲಿ ಅತಿಯಾದ ವೇಗದಿಂದ ವಾಹನ ಓಡಿಸುವ ವಾಹನಗಳನ್ನು ತಡೆದು, ಸ್ಥಳದಲ್ಲೇ ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳ ತಡೆಗೆ ಈ ಕ್ರಮ ಸಹಕಾರಿಯಾಗಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net