ಬೈಕ್ ಕದ್ದು ಬಿಡಿಭಾಗ ಮಾರುತ್ತಿದ್ದ ಖದೀಮರು ಅಂದರ್ !; ಕಳ್ಳ ಸ್ನೇಹಿತರ ಹೆಡೆಮುರಿ ಕಟ್ಟಿದ ಹಾವೇರಿ ಶಹರ ಠಾಣೆ ಪೊಲೀಸರು; 11 ಬೈಕ್, ಬಿಡಿ ಭಾಗ ಜಪ್ತಿ

13 HVR 7
Published on

ಹಾವೇರಿ: ಬೈಕ್‌ಗಳನ್ನು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಬಿಡಿ ಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಚಾಲಾಕಿ ಸ್ನೇಹಿತರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 1.58 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನ ಹಾಗೂ ಬಿಡಿ ಭಾಗಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬ್ಯಾಡಗಿ ಬೆಟ್ಟದಮಲ್ಲೇಶ್ವರ ನಗರದ ನಿವಾಸಿ ಮೈನುದ್ದೀನ್ ಬಸೀರಸಾಬ ಇನಾಮದಾರ ಹಾಗೂ ಬ್ಯಾಡಗಿ ಸಂಗಮೇಶ್ವರ ನಗರದ ಮಯುದ್ದೀನ್ ಸುಲೇಮಾನ್ ಕೋಳೂರ ಬಂಧಿತರು. ನಗರದಲ್ಲಿ ನಮ್ಮ ಅಧಿಕಾರಿ, ಸಿಬ್ಬಂದಿ ವಾಹನ ತಪಾಸಣೆ ಮಾಡುವಾಗ ಸಂಶಯಾಸ್ಪದ ಬೈಕ್ ಪತ್ತೆಯಾಗಿದೆ. ಅದರ ಹಿನ್ನೆಲೆ ಪರಿಶೀಲಿಸಿದಾಗ ಕಳ್ಳತನ ಮಾಡಿದ್ದೆಂದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಗೊತ್ತಾಗಬಾರದೆಂದು ಹತ್ತಾರು ಬೈಕ್ ಕದ್ದು, ಬಿಡಿ ಭಾಗ ಬೇರ್ಪಡಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದರು.
ಎಸ್‌ಪಿ ಅಂಶುಕುಮಾರ ಅವರ ಮಾರ್ಗದರ್ಶನದಲ್ಲಿ ಎಎಸ್‌ಪಿ ಸಿ.ಗೋಪಾಲ ಹಾಗೂ ಡಿವೈಎಸ್‌ಪಿ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಶಹರ ಠಾಣೆ ಪಿಐ ಮೋತಿಲಾಲ ಪವಾರ ನೇತೃತ್ವದ ತಂಡ ಪ್ರಕರಣ ಪತ್ತೆಮಾಡಿದೆ. ತಂಡದಲ್ಲಿ ತನಿಖಾಧಿಕಾರಿ ಪಿಎಸ್‌ಐ ಎಂ.ಕೆ.ಸೊರಟೂರ, ಪಿಎಸ್‌ಐ ಪಿ.ಡಿ.ಆರೇರ, ಸಿಬ್ಬಂದಿ ಎಂ.ಜಿ.ಎರೇಶೀಮಿ, ಎಸ್.ಜಿ.ವಡ್ನಿಕೊಪ್ಪ, ಮುತ್ತಪ್ಪ ಲಮಾಣಿ, ಚನ್ನಬಸಪ್ಪ, ನೀಲಕಂಠ ಲಿಂಗರಾಜು, ಎಂ.ಎಸ್.ಮೆಣಸಕ್ಕನವರ, ಚಂದ್ರಕಾಂತ ಎಲ್.ಆರ್., ಶ್ರೀಕಾಂತ ಪೂಜಾರ, ಮಾಲತೇಶ ಕಬ್ಬೂರ ತಂಡದಲ್ಲಿದ್ದರು. ಈ ತಂಡಕ್ಕೆ ಎಸ್‌ಪಿ ಅವರು ನಗದು ಬಹುಮಾನ ಘೋಷಿಸಿದ್ದಾರೆ ಎಂದು ವಿವರಿಸಿದರು.
ಗ್ಯಾರೇಜ್‌ಗೆ ಮಾರಾಟ
ಕದ್ದ ಬೈಕ್‌ಗಳಲ್ಲಿ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹಿರೇಕೆರೂರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿರುವ ಬೈಕ್‌ಗಳು ಸೇರಿವೆ. ಕದ್ದ ಬೈಕ್‌ಗಳ ಬಿಡಿ ಭಾಗಗಳನ್ನು ಬೇರ್ಪಡಿಸಿ ಸ್ಥಳೀಯ ಗ್ಯಾರೇಜ್‌ಗಳಿಗೆ ಮಾರಾಟ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net