ಅರೆಬೆತ್ತಲೆಯಾಗಿ ಪರಿಹಾರಕ್ಕೆ ಆಗ್ರಹಿಸಿದ ಮಣ್ಣೂರ ರೈತರು; ಅಪ್ಪರ್ ತುಂಗಾ ಯೋಜನೆಗೆ ಭೂಮಿ ನೀಡಿದ ಅನ್ನದಾತರ ಆಕ್ರೋಶ; 12 ವರ್ಷದಿಂದ ಬಂದಿಲ್ಲ ಹಣ

7 HVR 9
Published on

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ(ಎಟಿಪಿ)ಗೆ ಭೂಮಿ ನೀಡಿದ ರೈತರಿಗೆ ಹಲವು ವರ್ಷಗಳಿಂದ ಬಾಕಿ ಇರಿಸಿಕೊಂಡಿರುವ ಪರಿಹಾರವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಮಣ್ಣೂರ ಗ್ರಾಮದ ರೈತರು ಅರೆಬೆತ್ತಲೆಯಾಗಿ, ನೇಣಿಗೆ ಶರಣಾಗುವಂತೆ ಅಣಕು ಪ್ರದರ್ಶಿಸಿ ವಿಭಿನ್ನವಾಗಿ ಪ್ರತಿಭಟಿಸಿದರು.

ನಗರದ ದೇವಗಿರಿ ಡಿಸಿ ಕಚೇರಿ ರಸ್ತೆಯ ತುಂಗಾ ಮೇಲ್ದಂಡೆ ಯೋಜನೆ ಉಪವಿಭಾಗದ ಕಚೇರಿ ಎದುರು ಶುಕ್ರವಾರ ಜಮಾಯಿಸಿದ ನೊಂದ ರೈತರು ಪ್ರತಿಭಟನೆ ನಡೆಸಿದರು. ನಿರ್ಲಕ್ಷೃ ತೋರುತ್ತಿರುವ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಕಳೆದ 12 ವರ್ಷಗಳ ಹಿಂದೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ಮಣ್ಣೂರ ಗ್ರಾಮದ ಸುಮಾರು 35 ರೈತರು ಫಲವತ್ತಾದ ಭೂಮಿಯನ್ನು ನೀಡಿದ್ದಾರೆ. ಈಗಾಗಲೇ ಕಾಲುವೆ ನಿರ್ಮಾಣಗೊಂಡು ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಯದೇ ಎಲ್ಲೆಂದರಲ್ಲಿ ಒಡೆದು ಹಾಳಾಗಿ ಹೋಗಿವೆ ಎಂದು ದೂರಿದರು.

ರೈತರಿಗೆ ಅನುಕೂಲವಾಗಿ ಎಂಬ ಉದ್ದೇಶದಿಂದ ಫಲವತ್ತಾದ ಭೂಮಿಯನ್ನು ಗ್ರಾಮದ ಕೆಲವು ರೈತರು ನೀಡಿದ್ದು, ಇದುವರೆಗೂ ಸರ್ಕಾರದಿಂದ ನಯಾಪೈಸೆ ಪರಿಹಾರ ಹಣ ಬಂದಿಲ್ಲ. ಹೀಗಾಗಿ ಇತ್ತ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಸರ್ಕಾರದಿಂದ ಸೂಕ್ತ ಪರಿಹಾರವೂ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದು, ಜೀವನ ನಡೆಸಲು ಸಾಧ್ಯವಾಗದೇ ನೇಣಿಗೆ ಶರಣಾಗುವ ಸ್ಥಿತಿಗೆ ಬಂದಿದ್ದೇವೆ ಎಂದು ರೈತರು ನೋವು ತೋಡಿಕೊಂಡರು.

ಇದೇ ಯೋಜನೆಗಾಗಿ ನಮ್ಮ ಗ್ರಾಮದ ಸುತ್ತಮುತ್ತಲಿನ ಕೆಸರಳ್ಳಿ, ಶಿರಮಾಪುರ, ಹೊಸರಿತ್ತಿ, ಯಲಗಚ್ಚ ಗ್ರಾಮಗಳ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಆದರೆ, ಮಣ್ಣೂರ ಗ್ರಾಮದ ರೈತರಿಗೆ ಪರಿಹಾರ ನೀಡಿಲ್ಲ. ಈ ಕುರಿತು ಕಚೇರಿಗಳಿಗೆ ಅಲೆದಾಡಿದರೂ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಈರಣ್ಣ ಹೊಸಮನಿ, ಶೇಖಪ್ಪ ಕಮತರ, ಮಲ್ಲಪ್ಪ ಕುರಬರ, ವೀರೇಶ ಮಡ್ಲೂರ, ಶಿವಪ್ಪ ಅರಳಿಹಳ್ಳಿ, ಹೂವಪ್ಪ ಹಳೇಮನಿ, ನಿಂಗಪ್ಪ ಹನ್ನೀರ, ಶಾಂತಪ್ಪ ತಳವಾರ, ಪುಟ್ಟಪ್ಪ ಕಮತರ, ಶಂಭುಲಿಂಗ ಹಿರೇಮಠ, ಇತರರಿದ್ದರು.

ಇಂಜಿನಿಯರ್‌ಗೆ ತರಾಟೆ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇಂಜನಿಯರ್ ರಾಮಕೃಷ್ಣ ಕೆ. ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ನಮಗೆ ಪರಿಹಾರ ಹಣ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ರಾಮಕರಷ್ಣ ದೂರವಾಣಿ ಮೂಲಕ ಮೇಲಾಧಿಕಾರಿಗಳೊಂದಿಗೆ ಮಾತನಾಡಿದರು. ಮೂರು ತಿಂಗಳಲ್ಲಿ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net