150 ರೈತರಿಂದ ಸೋಯಾಬಿನ್‌ಗೆ ನೋಂದಣಿ; ಎಪಿಎಂಸಿಯಿಂದ ಶೇಂಗಾ, ಸೋಯಾ, ಭತ್ತ, ಹೆಸರು ಖರೀದಿ ಕೇಂದ್ರ ಆರಂಭ; ವಿಜಯವಾಣಿ ವರದಿ ಪರಿಣಾಮ

Published on

ಹಾವೇರಿ: ಜಿಲ್ಲೆಯ ವಿವಿಧ ಎಪಿಎಂಸಿಗಳನ್ನು ಜಿಲ್ಲಾಡಳಿತ ಸೋಯಾಬಿನ್, ಶೇಂಗಾ, ಹೆಸರು ಹಾಗೂ ಭತ್ತದ ಖರೀದಿ ಕೇಂದ್ರಗಳನ್ನು ತೆರೆದಿದ್ದು, 150ಕ್ಕೂ ಅಧಿಕ ರೈತರು ಸೋಯಾಬಿನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ.

ರೈತರು ಶೇಂಗಾ, ಸೋಯಾಬಿನ್ ಬೆಳೆಗಳ ಕಟಾವು ಮಾಡಿ ರಸ್ತೆಬದಿ ಒಣಗಿಸುತ್ತಿದ್ದರು. ಹಲವೆಡೆ ಸತತ ಮಳೆಗೆ ಶೇಂಗಾ ಕೊಳೆತು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಡಿಸಿ ಅವರ ಆದೇಶದ ನಡುವೆಯೂ ಎಪಿಎಂಸಿಗಳು ಖರೀದಿ ಕೇಂದ್ರಗಳನ್ನು ತೆರೆಯಲು ಮೀನಮೇಷ ಎಣಿಸುತ್ತಿದ್ದವು.

ಈ ಸಮಸ್ಯೆ ಕುರಿತು ‘ರಸ್ತೆಬದಿ ಕೊಳೆಯುತ್ತಿದೆ ಶೇಂಗಾ’ ಶಿರ್ಷಿಕೆಯಡಿ ‘ವಿಜಯವಾಣಿ’ ಪತ್ರಿಕೆ ಅ.1ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಜಿಲ್ಲೆಯ ವಿವಿಧ ಎಪಿಎಂಸಿಗಳನ್ನು ಶೇಂಗಾ, ಸೋಯಾಬಿನ್, ಹೆಸರು ಹಾಗೂ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿತ್ತು. 150ಕ್ಕೂ ಅಧಿಕ ರೈತರು ಸೋಯಾಬಿನ್ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಆದರೆ, ಶೇಂಗಾ ಮಾರಾಟಕ್ಕೆ ಹೆಸರು ನೋಂದಾಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ತಿಳಿಸಿದ್ದಾರೆ.

ನ.30ರವರೆಗೆ ಅವಕಾಶ

ಜಿಲ್ಲೆಯ ವಿವಿಧೆಡೆ ಆರಂಭಿಸಿರುವ ಖರೀದಿ ಕೇಂದ್ರಗಳಲ್ಲಿ ರೈತರು ನವೆಂಬರ್ 30ರವರೆಗೆ ಶೇಂಗಾ, ಸೋಯಾಬಿನ್, ಹೆಸರು ಹಾಗೂ ಭತ್ತ ಖರೀದಿಗೆ ಹೆಸರು ನೋಂದಾಯಿಸಬಹುದು. ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಕ್ವಿಂಟಲ್ ಸೋಯಾಬಿನ್‌ಗೆ 5,328 ರೂ. ಹಾಗೂ ಪ್ರತಿ ಕ್ವಿಂಟಲ್ ಶೇಂಗಾಕ್ಕೆ 7,263 ರೂ.ನಂತೆ ಖರೀದಿಸಬೇಕು. ಪ್ರತಿ ಎಕರೆಗೆ 3 ಕ್ವಿಂಟಲ್‌ನಿಂದ ಗರಿಷ್ಠ 20 ಕ್ವಿಂಟಲ್ ಖರೀದಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net