ತ್ವರಿತವಾಗಿ ಆ್ಯಂಟಿ ಡ್ರಗ್ ಕಮಿಟಿ ರಚಿಸಿ; ಅಧಿಕಾರಿಗಳಿಗೆ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ

Published on

ಹಾವೇರಿ: ಜಿಲ್ಲೆಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ವಸ್ತುಗಳ ದುರುಪಯೋಗವನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು. ತ್ವರಿತವಾಗಿ ಆ್ಯಂಟಿ ಡ್ರಗ್ ಕಮಿಟಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಯವರ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ವಸ್ತುಗಳ ದುರುಪಯೋಗ ತಡೆಗಟ್ಟಲು ಎನ್‌ಸಿಒಆರ್‌ಡಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಾದಕ ವ್ಯಸನವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಮಸ್ಯೆಗಳಲ್ಲಿ ಒಂದಾಗಿದೆ. ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕೆ ಮುಂದಾಗಬೇಕು. ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಯಾವುದೇ ಭಯವಿಲ್ಲದೆ, ನಿರ್ಭೀತಿಯಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.

ಜಿಲ್ಲೆಯ ಎಲ್ಲ ಶಾಲೆ, ಕಾಲೇಜ್ ಹಾಗೂ ಹಾಸ್ಟೆಲ್‌ಗಳಲ್ಲಿ ಆ್ಯಂಟಿ ಡ್ರಗ್ಸ್ ಕಮಿಟಿ ರಚಿಸಿ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಬೇಕು. ಅತಿ ಹೆಚ್ಚು ಪ್ರಮಾಣದಲ್ಲಿ ಇಂದು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದರ ಬಗ್ಗೆ ವರದಿಯಾಗುತ್ತಿವೆ. ಇದನ್ನು ಹತೋಟಿಗೆ ತರಲು ಆ್ಯಂಟಿ ಡ್ರಗ್ ಕಮಿಟಿ ರಚನೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಕಮಿಟಿ ರಚಿಸಿ ಆ ಮೂಲಕ ಮಾದಕ ವ್ಯಸನಕ್ಕೆ ಒಳಗಾಗುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net