

ಹಾವೇರಿ: ಹಾವೇರಿ ಅನ್ನದಾತ 251 ಎಂದೇ ಖ್ಯಾತಿ ಹೊಂದಿರುವ ಡಾ.ಬಿ.ಆರ್.ಅಂಬೇಡ್ಕರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹೋರಿಯ 5ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಹೋರಿಯ 55 ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಅನ್ನದಾತ ಹೋರಿ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಾವೇರಿ ಜಿಲ್ಲಾಸ್ಪತ್ರೆಯ ಹಾವೇರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು. ಕೇಕ್ ಕತ್ತರಿಸಿ ಸಿಹಿ ಹಂಚಿದರು. ಬಡವರಿಗೆ ಸ್ವೆಟರ್, ಬಟ್ಟೆ ವಿತರಣೆ ಮಾಡಿದರು. ಅನ್ನಪ್ರಸಾದ ವಿತರಿಸಿದರು.
ಚಾಲೆಂಜಿಂಗ್ ಸ್ಟಾರ್, ಹೋರಿ ಹಬ್ಬದ ಉಡಾಳ ಎಂದೆಲ್ಲ ಕರೆಸಿಕೊಳ್ಳುವ ಈ ಅನ್ನದಾತ ಹೋರಿ ರಾಜ್ಯಾದ್ಯಂತ ಸಹಸ್ರಾರು ಅಭಿಮಾನಿಗಳನ್ನು ಹೊಂದಿದೆ. ವಿವಿಧೆಡೆ ಹೋರಿ ಸ್ಪರ್ಧೆಗಳಲ್ಲಿ 4 ಬೈಕ್, ಚಿನ್ನದ ಪದಕಗಳು, ರೆಫ್ರಿಜರೇಟರ್ ಸೇರಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
1.5 ಲಕ್ಷ ರೂ. ಕೊಟ್ಟು ಖರೀದಿ
5 ವರ್ಷದ ಹಿಂದೆ ಸಂತೋಷ ಕೆಂಚಣ್ಣನವರ, ಗುಡ್ಡಪ್ಪ ದೊಡ್ಡಮನಿ, ಪಕ್ಕೀರೇಶ ಪುರದ ಹಾಗೂ ಮಂಜುನಾಥ ಮಾಳಗಿ ಸ್ನೇಹಿತರೆಲ್ಲ ಸೇರಿ ತಮಿಳುನಾಡಿನಿಂದ 1.5 ಲಕ್ಷ ರೂ. ಕೊಟ್ಟು ಹೋರಿ ಖರೀದಿಸಿದ್ದೇವೆ. ಹೋರಿಗೆ ರಾಜ್ಯಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿದ್ದೇವೆ ಎಂದು ಸಂತೋಷ ಕೆಂಚಣ್ಣನವರ ತಿಳಿಸಿದ್ದಾರೆ.