

ಹಾವೇರಿ: ನಗರದ ದಾನಮ್ಮದೇವಿ ಗುಡಿ ಎದುರು ಖಬರಸ್ತಾನದಲ್ಲಿ ವಾಣಿಜ್ಯ ಮಳಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಮಗೆ ಯಾವುದೇ ಪತ್ರ, ನೋಟಿಸ್ ಕೊಟ್ಟಿಲ್ಲ ಎಂದು ಹಾವೇರಿ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಬರಸ್ತಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಅಶೂರ್ ಖಾನ್ ಕಟ್ಟಡ ಹಾಗೂ ವಾಣಿಜ್ಯ 10 ಮಳಿಗೆಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ವಕ್ಫ್ ಬೋರ್ಡ್ ಹಾಗೂ ನಗರಸಭೆಯಿಂದ ಅನುಮತಿ ಪಡೆಯಲಾಗಿದೆ. ಜಿಲ್ಲಾಧಿಕಾರಿಯವರು ಸದ್ಯಕ್ಕೆ ಸ್ಥಗಿತಗೊಳಿಸಲು ಮೌಖಿಕವಾಗಿ ಹೇಳಿದ್ದರಿಂದ ಈಗ ಸ್ಥಗಿತ ಮಾಡಿದ್ದೇವೆ ಎಂದರು.
ದಾನಮ್ಮ ದೇವಿ ಗುಡಿಗೆ ನಾವು ಹಿಂದುಗಳಷ್ಟೇ ಗೌರವ ಸಲ್ಲಿಸುತ್ತೇವೆ. ನಮ್ಮದು ಬಡವರು ಹೆಚ್ಚಾಗಿರುವ ಸಮಾಜ. ಬಡವರಿಗೆ ಸಹಾಯವಾಗಲೆಂದು ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸುತ್ತಿದ್ದೇವೆ. ಆ ಮಳಿಗೆಗಳಲ್ಲಿ ಮೊಟ್ಟೆ, ಮಾಂಸದ ವ್ಯಾಪಾರ ಮಾಡಲ್ಲ. ಮಾಡಿದರೆ ನಗರಸಭೆಯವರು ಸೀಜ್ ಮಾಡಲಿ. ಈ ಕುರಿತು ಕಾನೂನು ಸಲಹೆ ಪಡೆಯಲಾಗುವುದು. ಕಾನೂನಿನ ಪ್ರಕಾರ ಕಾಮಗಾರಿ ಬಂದ್ ಮಾಡಬೇಕು ಎಂದಲ್ಲಿ ಬಂದ್ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಅನ್ವರ್ ಕಡೆಮನಿ, ಚಮನ್ ಮುಲ್ಲಾ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಸದಸ್ಯರಾದ ಇಮಾಮ್‌ಹುಸೇನ್ ಬಾಲಿಬಾಯಿ, ಉಸ್ಮಾನಸಾಬ ಪಟವೇಗಾರ, ಜಮೀರ್ ಜಿಗರಿ, ಇಸ್ಮಾಯಿಲ್ ಅಬ್ಬೇರ, ಅಜ್ಮತ್ ಶೇಖ್, ವಾಸಿಮ್ ಸುನ್ನಾಖಾನ್, ಹಜರತಲಿ ತಹಸೀಲ್ದಾರ್, ರಫೀಕ್ ಸವಣೂರ ಇದ್ದರು.