

ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ 21 ವರ್ಷದ ಅಂಜಲಿ ಅಂಬಿಗೇರ ಹತ್ಯೆ ತೀವ್ರ ಖಂಡನೀಯವಾಗಿದ್ದು, ಕೂಡಲೇ ಆರೋಪಿಯನ್ನು ಬಂಧಿಸಬೇಕು. ತಪ್ಪಿತಸ್ಥನನ್ನು ಗಲ್ಲಿಗೇರಿಸಬೇಕು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಅಜ್ಜಿಯ ಮನೆಯಲ್ಲಿದ್ದ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ. ಕೊಲೆಯಾದ ಯುವತಿ ತಂದೆ-ತಾಯಿಯನ್ನು ಕಳೆದುಕೊಂಡಿದ್ದು, ಅವಳ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಆ ಮನೆಗೆ ಆಧಾರಸ್ತಂಭವಾಗಿದ್ದಳು. ಕಾರಣ ಆ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಗೃಹಸಚಿವರು ತಕ್ಷಣ ಯುವತಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಬೋವಿ, ತಾಲೂಕು ಅಧ್ಯಕ್ಷ ಚಂದ್ರಶೇಖರ ಜಾಡರ, ಯಲ್ಲಪ್ಪ ಓಲೇಕಾರ, ರಾಮಚಂದ್ರಪ್ಪ ಐರಣಿ, ಪ್ರಮುಖರಾದ ಗಣೇಶ ಬಿಷ್ಠನವರ, ಶಂಕರ ಸುತಾರ, ಪುತ್ರನ್ ದಂಡಿನ, ಕರಬಸಪ್ಪ ಹಳದೂರ, ನಿಂಗಪ್ಪ ಹೆಗ್ಗಣ್ಣನವರ, ಹೊನ್ನಪ್ಪ ಸಣ್ಣಬಾರ್ಕಿ, ದತ್ತಾತ್ರೇಯ ಬಂಗೇರ, ಸುರೇಶ ಹುಳಬುತ್ತಿ, ಸುನಿಲ ಗುಳೇದ, ಜಿತೇಂದ್ರ ಸುಣಗಾರ, ಫಕ್ಕಿರೇಶ ಕಳಸೂರ, ಚಿತ್ರಪ್ಪ ಹೊನ್ನತ್ತಿ, ನಾಗರಾಜ ಆಲದಕಟ್ಟಿ, ಇತರರಿದ್ದರು.