ಸಾಧನೆಗೆ ಕುಟುಂಬದ ಬೆಂಬಲ ಬೇಕು; ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ; ಕವಯತ್ರಿ ಅನಿತಾ ಮಂಜುನಾಥ ಕವನ ಸಂಕಲನ ಬಿಡುಗಡೆ

22 HVR 11 B
Published on

ಹಾವೇರಿ: ಕುಟುಂಬದ ಬೆಂಬವಿಲ್ಲ ಇಲ್ಲದಿದ್ದರೆ ಯಾವುದೇ ಸಾಧಕರಿಗೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಸಾಧನೆಗೆ ಕುಟುಂಬದ ಬೆಂಬಲ ಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಹೇಳಿದರು.

ತುಮಕೂರಿನ ತಪೋವನ ಹಿರೇಮಠ ಮತ್ತು ಹಾವೇರಿಯ ಸದಾನಂದ ಪ್ರಕಾಶನ ಜಂಟಿಯಾಗಿ ತುಮಕೂರಿನ ತಪೋವನದಲ್ಲಿ ಬುಧವಾರ ಆಯೋಜಿಸಿದ್ದ ಹಾವೇರಿಯ ಕವಯತ್ರಿ ಅನಿತಾ ಮಂಜುನಾಥ ಅವರ ‘ಬೆಳಕಿನ ಬೆನ್ನ ಹಿಂದೆ’ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅನಿತಾರ ಪ್ರತಿ ಹನಿಗವಿತೆ ಭಾವನಾತ್ಮಕವಾಗಿದ್ದು, ನವಿರು ಶಬ್ದಭಾವಗಳಿಂದ ಮನಸ್ಸನ್ನು ಸೆಳೆಯುತ್ತವೆ. ತಮಗೆ ಹತ್ತಿರವಿರುವ ವಸ್ತುಗಳನ್ನೇ ಆಯ್ದುಕೊಂಡು ಬರೆದಿರುವುದು ಸಂಕಲನದ ವಿಶೇಷ. ಇದು ಒಂದು ರೀತಿಯಲ್ಲಿ ಅನಿತಾ ಅವರ ಅಂತರಂಗದ ಪುಟಗಳೇ ಆಗಿವೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹನಿಗವಿತೆ ಎಂದರೆ ಮಡಿಕೆಯೊಂದರಲ್ಲಿ ಸಮುದ್ರವನ್ನು ಹಿಡಿದು ಇಟ್ಟಂತೆ. ಇವು ಕವಿಯ ಪ್ರತಿಭೆಗೆ ಸವಾಲು ಹಾಕುವಂತಹವು. ಮೊದಲ ಸಂಕಲನದಲ್ಲಿಯೇ ವೈವಿಧ್ಯಮಯ ಕಾವ್ಯವನ್ನು ಅನಿತಾ ನೀಡಿದ್ದಾರೆ ಎಂದರು.

ಕವಯತ್ರಿ ಅನಿತಾ ಮಾತನಾಡಿ, ನಾನು ಓದಿ, ಆಡಿ ಬೆಳೆದ ತುಮಕೂರಿನಲ್ಲಿ, ಅದರಲ್ಲೂ ತಪೋವನದಲ್ಲಿ ಕವನ ಸಂಕಲನ ಬಿಡುಗಡೆಯಾಗಬೇಕೆಂಬ ಕನಸು ನನಸಾಗಿದೆ. ಹಾವೇರಿ ಮತ್ತು ತುಮಕೂರು ನನ್ನ ಸಾಹಿತ್ಯ ಸಾಧನೆಗೆ ಬೆಂಬಲ ಕೊಟ್ಟಿವೆ. ಇವನ್ನು ನಾನು ಮರೆಯಲಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಪ್ರೊ.ಸಿದ್ದಲಿಂಗಪ್ಪ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವ ಡಾ.ಎನ್.ಎಂ ಸಾಲಿ, ಹಿರಿಯ ಲೇಖಕ ಸತೀಶ ಕುಲಕರ್ಣಿ ಮಾತನಾಡಿದರು.

ಹಾವೇರಿ ಸಾಹಿತಿ ಕಲಾವಿದರ ಬಳಗದಿಂದ ಅನಿತಾ ಮಂಜುನಾಥ ದಂಪತಿಯನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಲೇಖಕಿ ಡಾ.ಓ.ಆರ್ ಲೀಲಾವತಿ, ಅಮೇರಿಕದ ಡಾ.ಶಿವಾನಂದ ಉಲ್ಲಾಸರ್, ಲೇಖಕ ನಾಮದೇವ ಕಾಗದಗಾರ, ಚಂದ್ರಪ್ಪ, ಶಂಕ್ರಪ್ಪ, ನಾಗರತ್ನಾ, ಇತರರು ಉಪಸ್ಥಿತರಿದ್ದರು. ಸುನಿತಾ ಪುನೀತಕುಮಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಿಖಿತಾ ಮತ್ತು ಜೀವಿಕಾ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಬಿ.ವಿ. ನಿರೂಪಿಸಿದರು. ಶಿವಮ್ಮ ಸ್ವಾಗತಿಸಿದರು. ನಯನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net