

ಹಾವೇರಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸಿ ಮತ್ತು ಡಿ ದರ್ಜೆಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ 26 ಸಾವಿರ ರೂ. ವೇತನ ನೀಡಬೇಕು, ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದಿಂದ ಡಿಸಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಸೇವೆಗೆ ಸೇರಿದವರಿಗೆ 2011-12ನೇ ಸಾಲಿನಿಂದ ನಿವೃತ್ತರಾದವರಿಗೆ ಗ್ಯಾಚ್ಯುಟಿ ನೀಡಬೇಕು. ಪೌಷ್ಠಿಕ ಆಹಾರ ವಿತರಿಸಲು ಜಾರಿಗೆ ತಂದಿರುವ ಫಲಾನುಭವಿಗಳ ಮುಖ ಚಹರೆ ಗುರುತಿಸುವ ಎಫ್‌ಆರ್‌ಎಸ್ ಪದ್ಧತಿ ಕೈಬಿಡಬೇಕು. ನಿವೃತ್ತರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಅಂಗನವಾಡಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಬೇಕು. 2 ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಭಾರ ಭತ್ಯೆ ಹೆಚ್ಚಿಸಬೇಕು. ಅಂಗನವಾಡಿ ಹೊರತುಪಡಿಸಿ ಬೇರೆ ಕೆಲಸಗಳಿಗೆ ನಿಯೋಜಿಸಬಾರದು. ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷೆ ಸುನಂದಾ ರೇವಣಕರ, ಉಪಾಧ್ಯಕ್ಷೆ ಸುನಿತಾ ಮರ್ಕಳ್ಳಿ, ನಾಗರತ್ನಾ ಎಲಿಗಾರ, ಪ್ರೇಮಾ ಬೂದಪುರ, ರೇಷ್ಮಾ ಬಾನು, ಭಾರತಿ ಹಿರೇಮಠ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.