ಕಳಪೆ ಮೊಟ್ಟೆ ಪ್ರಕರಣ, ಗುತ್ತಿಗೆದಾರರಿಗೆ ನೋಟಿಸ್

13 HVR 8 B
Published on

ಹಾವೇರಿ: ಜಿಲ್ಲೆಯಲ್ಲಿ ಕೆಲ ಅಂಗನವಾಡಿಗಳಿಗೆ ಪೂರೈಸಿದ ಮೊಟ್ಟೆಗಳು ಕಳಪೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲೆಯ ಅಂಗನವಾಡಿಗಳಿಗೆ ಮೊಟ್ಟೆ ಪೂರೈಸುವ ನಾಲ್ವರು ಗುತ್ತಿಗೆದಾರರಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ.
ಪತ್ರಿ ಪೌಲ್ಟಿ ಫಾರ್ಮ್(ಮೂರು ತಾಲೂಕು), ಕರ್ನಾಟಕ ಕುಕ್ಕುಟ ಮಹಾಮಂಡಳ(ಎರಡು ತಾಲೂಕು), ಕಿತ್ತೂರ ಚನ್ನಮ್ಮ ಪೌಲ್ಟ್ರಿ (ಒಂದು ತಾಲೂಕು) ಹಾಗೂ ಸಮರ್ಥ ಅಲೈಡ್ ಏಜೆನ್ಸಿ (ಒಂದು ತಾಲೂಕು)ಗೆ ನೋಟಿಸ್ ನೀಡಲಾಗಿದೆ. ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದು ಯಾಕೆ ? ಯಾವ ಅವಧಿಯಲ್ಲಿ ಎಷ್ಟು ಮೊಟ್ಟೆಗಳನ್ನು ಪೂರೈಸಿದ್ದೀರಿ ? ಎಂಬಿತ್ಯಾದಿ ಅಂಶಗಳ ಕುರಿತು ವರದಿ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಅವರಿಂದ ಉತ್ತರ ಬಂದ ಕೂಡಲೇ ತಪ್ಪು ಕಂಡು ಬಂದರೆ ಅಂತಹ ಏಜೆನ್ಸಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
‘ಅಂಗನವಾಡಿ ಮೊಟ್ಟೆಗಳಿಗೆ ಕಳಪೆ ಮೊಟ್ಟೆ ಪೂರೈಕೆ’ ಶೀರ್ಷಿಕೆಯಡಿ ‘ವಿಜಯವಾಣಿ’ ದಿನಪತ್ರಿಕೆ ಜು.14ರಂದು ವರದಿ ಪ್ರಕಟಿಸಿತ್ತು. ಈ ವರದಿ ಬೆನ್ನಲ್ಲೇ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಸಿಡಿಪಿಒಗಳಿಗೂ ಸೂಚನೆ
ಗರ್ಭಿಣಿಯರಿಗೆ ದಿನಕ್ಕೊಂದು ಮೊಟ್ಟೆ, ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ (ಬುಧವಾರ ಮತ್ತು ಶುಕ್ರವಾರ) ಮೊಟ್ಟೆ ಬೇಯಿಸಿ ಅಂಗನವಾಡಿಯಲ್ಲೇ ನೀಡಲಾಗುತ್ತದೆ. ಅಂಗನವಾಡಿಗಳಿಗೆ ಬರುವ ಮೊಟ್ಟೆಗಳನ್ನು ಕಾರ್ಯಕರ್ತೆಯರು ಪರಿಶೀಲಿಸಿ ತೆಗೆದುಕೊಳ್ಳಬೇಕು. ಈ ಬಗ್ಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ)ಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಸಿಡಿಪಿಒಗಳಿಗೂ ನೋಟಿಸ್ ನೀಡಲಾಗಿದೆ ಎಂದು ಇಲಾಖೆ ಡಿಡಿ ಶ್ರೀನಿವಾಸ ಆಲದರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net