

ಹಾವೇರಿ: ಅತಿಯಾದ ತಂತ್ರಜ್ಞಾನಗಳ ಬಳಕೆ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದ್ದು, ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅರಿತು ಸಸಿ ನೆಟ್ಟು ಪೋಷಿಸಬೇಕು ಎಂದು ಅನನ್ಯ ಇಂಟರ್ ನ್ಯಾಶನಲ್ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಿ. ಹಾವೇರಿ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಕಾಗಿನೆಲೆ ರಸ್ತೆ ಸಮೀಪದ ಸಿ.ಡಿ. ಹಾವೇರಿ ಶಿಕ್ಷಣ ಸಂಸ್ಥೆಯ ಅನನ್ಯ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಗುರುವಾರ ಸಸಿ ನೆಟ್ಟು ಅವರು ಮಾತನಾಡಿದರು.
ಮಕ್ಕಳು ಪ್ರತಿ ಬಾರಿ ತಮ್ಮ ಜನ್ಮ ದಿನಾಚರಣೆ ವೇಳೆ ಮನೆ, ಶಾಲೆಗಳ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಇನ್ನೊಬ್ಬರ ಜನ್ಮದಿನದಂದು ಕೇವಲ ಕೇಕ್ ಕತ್ತರಿಸಿ ಸುಮ್ಮನಾಗದೇ ಸಸಿಗಳನ್ನು ಉಡುಗೊರೆಯಾಗಿ ನೀಡಿದರೆ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಈ ರೀತಿ ಪರಿಸರಕ್ಕೆ ಹತ್ತಿರವಾಗುವ ಕೆಲಸಗಳನ್ನು ಮಾಡಿ ಎಂದು ಕರೆ ನೀಡಿದರು.
ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯ ಕುರಿತು ನಾಟಕ ಹಾಗೂ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಮಲ್ಲಿಕಾರ್ಜುನ ಹಾವೇರಿ, ಪ್ರಾಂಶುಪಾಲ ಶಿವಶಂಕರ ಮೋಟಗಿ, ಅನನ್ಯ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಸುಮಾ ಬಾಲಕೃಷ್ಣ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.