

ಹಾವೇರಿ: ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಯೋಗ ಅತಿ ಅವಶ್ಯಕವಾಗಿದೆ ಎಂದು ಅನನ್ಯ ಇಂಟರ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಅಭಿಪ್ರಾಯಪಟ್ಟರು. ನಗರದ ಅನನ್ಯ ಇಂಟರ ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಯೋಗ ಜೀವನದ ಅವಿಭಾಜ್ಯ ಅಂಗವೆಂದು ತಿಳಿಯಬೇಕು ಎಂದು ಕರೆ ನೀಡಿದರು. ಪ್ರಾಚಾರ್ಯ ಸಂತೋಷಗೌಡ ಪಾಟೀಲ ಮಾತನಾಡಿ, ಸದೃಢವಾದ ಶರೀರ ಹಾಗೂ ಮನಸ್ಸು ನಿರ್ಮಾಣವಾಗಬೇಕಾದರೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಯೋಗಪಟು ಬಿ.ಎಸ್.ಭೀಮಣ್ಣನವರ ಮಕ್ಕಳಿಗೆ ವಿವಿಧ ಆಸನಗಳನ್ನು ಹೇಳಿಕೊಟ್ಟರು. ಶಾಲೆಯ ನಿರ್ದೇಶಕ ಬಸವರಾಜ ಬಿಂಕದಕಟ್ಟಿ, ಸಂತೋಷ ಹಿರೇಮಠ, ಬಸವರಾಜ ಕೋಟಿ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಕಿಶೋರಿ ಕರ್ಮರಿಮಠ, ಶಾಲೆಯ ಶಿಕ್ಷಕರು, ಸಿಬ್ಬಂದಿ, ನೂರಾರು ಮಕ್ಕಳು, ಇತರರು ಪಾಲ್ಗೊಂಡಿದ್ದರು. ಶಿಕ್ಷಕಿ ಕಲಾಶ್ರೀ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪೂರ್ಣಿಮಾ ಕ್ಯಾಲಕೊಂಡ ನಿರೂಪಿಸಿದರು.