

ಹಾವೇರಿ: ತಾಲೂಕಿನ ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14 ಮತ್ತು 15ರಂದು ಅಂಬಿಗರ ಏಳನೇ ಶರಣ ಸಂಸ್ಕೃತಿ ಉತ್ಸವ ಜರುಗಲಿದ್ದು, ಉತ್ಸವದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಬೆಳಗ್ಗೆ 6 ಗಂಟೆಗೆ ಸುಂಗಲೆಯರಿಂದ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ ನಡೆಯಲಿದೆ. ಬೆಳಗ್ಗೆ 8ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಮೂಲ ಐಕ್ಯಮಂಟಪದ ಪೂಜೆ, ಬೆಳಗ್ಗೆ 10ಕ್ಕೆ ಸಾಮೂಹಿಕ ರಕ್ತದಾನ ಶಿಬಿರ ಜರುಗಲಿದೆ. ಮಧ್ಯಾಹ್ನ 12ಕ್ಕೆ ಸರ್ವಧರ್ಮ ಸಾಮೂಹಿಕ ಸರಳ ವಿವಾಹ ಮಹೋತ್ಸವ ಹಾಗೂ ಲಿಂ.ಪೂಜ್ಯರಾದ ಶಾಂತಮುನಿ ಮಹಾಸ್ವಾಮಿಗಳವರ 9ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 1.30ಕ್ಕೆ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆಯಲಿದೆ. ರಾತ್ರಿ 7ಕ್ಕೆ ಪ್ರಪ್ರಥಮ ಬಾರಿಗೆ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ ಜರುಗಲಿದೆ. ರಾತ್ರಿ 8ಕ್ಕೆ ಅಂಬಿಗರ ಸಾಂಸ್ಕೃತಿಕ ಹಾಗೂ ಜಾನಪದ ಕಲಾಮಹೋತ್ಸವ ಅಂಗವಾಗಿ ನಿಜಶರಣ ಚೌಡಯ್ಯನವರ ಜೀವನಾಧಾರಿತ ದೃಶ್ಯಾವಳಿ ಪ್ರದರ್ಶನ ಜರುಗಲಿದೆ. ಪವಾಡಗಳ ಅನಾವರಣ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉದ್ಘಾಟಿಸಲಿದ್ದು, ಶಾಸಕ ಹಾಗೂ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜ.15ರಂದು ಬೆಳಗ್ಗೆ 8ಕ್ಕೆ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಧರ್ಮ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದೆ. ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯುತ್ಸವ ಹಾಗೂ ಶ್ರೀಗಳ 9ನೇ ಪೀಠಾರೋಹಣ ವಾರ್ಷಿಕೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ವಚನಗ್ರಂಥ ಬಿಡುಗಡೆ ಹಾಗೂ ವಚನಗ್ರಂಥ ಮಹಾರಥೋತ್ಸವ ಜರುಗಲಿದೆ. ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ಸಿದ್ದಾಶ್ರಮ ಅವರಿಗೆ 'ವೀರಗಣಾಚಾರಿ ನಿಜಶರಣ ಅಂಬಿಗರ ಚೌಡಯ್ಯ' ಪ್ರಶಸ್ತಿ ನೀಡಲಾಗುವುದು ಎಂದರು.
ನಾಡಿನ ವಿವಿಧ ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಮಾಜಿ ಶಾಸಕರು, ಮಾಜಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ಬಸವರಾಜ ಕಳಸೂರ, ಎಸ್.ಎನ್ ಮೇಡ್ಲೇರಿ, ಶಂಕರ ಸುತಾರ, ನಾಗಪ್ಪ ಶೇಷಗಿರಿ, ಶೇಖಣ್ಣ ಬಾರ್ಕಿ, ನಿಂಗಪ್ಪ ಹೆಗ್ಗಣ್ಣವರ, ಕರಬಸಪ್ಪ ಹಳದೂರ, ಇತರರು ಇದ್ದರು.
ಎಸ್‌ಟಿ ಮೀಸಲಾತಿ ನೀಡದಿದ್ದರೆ ಹೋರಾಟ
ಅಂಬಿಗರ ಸಮುದಾಯ ವ್ಯಾಪ್ತಿಗೆ ಒಳಪಡುವ ಹಲವು ಉಪಜಾತಿಗಳನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಇದೆ. ರಾಜ್ಯ ಸರ್ಕಾರ ಮೀಸಲಾತಿ ನೀಡಿದ್ದರೆ ಜಾತ್ರೆಯ ನಂತರ ಹೋರಾಟ ಆರಂಭಿಸಲಾಗುವುದು ಎಂದರು ಶ್ರೀಗಳು ಎಚ್ಚರಿಕೆ ನೀಡಿದರು.
ನಾಲ್ಕು ಶಾಖಾ ಮಠ ಆರಂಭ
ಕಲಬುರಗಿ ಜಿಲ್ಲೆಯ ಚೌಡಾಳದಲ್ಲಿ 16 ಎಕರೆ ಜಾಗ ಖರೀದಿಸಲಾಗಿದ್ದು, ಅಲ್ಲಿ ಶಾಖಾ ಮಠ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಭಾಗದಲ್ಲಿ ಒಟ್ಟು ನಾಲ್ಕು ಹೊಸ ಶಾಖಾ ಮಠಗಳನ್ನು ತೆರೆಯಲಾಗುವುದು ಎಂದು ಶ್ರೀಗಳು ತಿಳಿಸಿದರು.