ಅಂಬಿಗರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ; ಮೇ.21ಕ್ಕೆ ರಾಜ್ಯಮಟ್ಟದ ಅಂಬಿಗರ ಸಭೆ; ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

Shantabhishma Swamiji
Published on

ಹಾವೇರಿ: ಅಂಬಿಗರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಚರ್ಚಿಸಲು ತಾಲೂಕಿನ ಸುಕ್ಷೇತ್ರ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಮೇ.21ರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಮಟ್ಟದ ಅಂಬಿಗರ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಪೀಠಾಧ್ಯಕ್ಷ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿಗೆ ಸೇರ್ಪಡೆ ಮಾಡುವ ಕುರಿತು ಸರ್ಕಾರಕ್ಕೆ ಹಲವು ಬಾರಿ ಒತ್ತಡ ಹಾಕಲಾಗಿದೆ. ಮಾಜಿ ಸಿಎಂಗಳಾದ ಬಿಎಸ್‌ವೈ, ಎಚ್‌ಡಿಕೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಈಗಿನ ಸಿಎಂ ಸಿದ್ದರಾಮಯ್ಯ ಕಳೆದ ಬಾರಿ ಸಿಎಂ ಆಗಿದ್ದಾಗಲೂ ಮನವಿ ಸಲ್ಲಿಸಿದ್ದೇವೆ. ಆದರೆ, ಭರವಸೆ ನೀಡುತ್ತಾರೆ ಹೊರತು ಘೋಷಣೆ ಮಾಡುತ್ತಿಲ್ಲ. ಹಾಗಾಗಿ ಮೇ 21ರ ಸಭೆಯಲ್ಲಿ ಪ್ರಮುಖವಾಗಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಕುರಿತಾಗಿ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಅಂಬಿಗರ ಸಮಾಜದಲ್ಲಿ ಅನೇಕ ಉಪ ಪಂಗಡಗಳು ಬರಲಿದ್ದು, ರಾಜ್ಯ ಸರ್ಕಾರ ಸಮಾಜದ ಬಗ್ಗೆ ನೀಡಿರುವ ಅಂಕಿ ಅಂಶಗಳು ತೃಪ್ತಿದಾಯಕವಾಗಿಲ್ಲ. ಜಾತಿ ಜನಗಣತಿ ವೇಳೆ ಮಾಹಿತಿ ಸಂಗ್ರಹಿಸುತ್ತಿರುವುದು ಸರಿಯಾಗಿಲ್ಲ. ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ಜಾತಿಗಣತಿ ಕುರಿತು ಚರ್ಚಿಸಲಾಗುವುದು. ಅದೇ ರೀತಿ ಪ್ರವರ್ಗ-1ರ ಆದಾಯ ಮಿತಿ (ಕ್ರಿಮಿ ಲೆಯರ್) ಕೆನೆಪದರು ನೀತಿ ಕೈಬಿಡುವಂತೆ ಮನವಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಿದರು.

ಸಮಾಜದ ಹಾಲಿ, ಮಾಜಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಸೇರಿದಂತೆ ಎಲ್ಲ ಮುಖಂಡರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ, ರಾಮಚಂದ್ರ ಐರಣಿ, ಎಸ್.ಎನ್ ಮೇಡ್ಲೇರಿ, ಫಕ್ಕೀರಪ್ಪ ತುಮ್ಮಿನಕಟ್ಟಿ, ಕರಬಸಪ್ಪ ಹಳದೂರ, ಮಾರುತಿ ಕಬ್ಬೇರ, ಪ್ರವೀಣ ವಡ್ನಿಕೊಪ್ಪ, ಮಂಜುನಾಥ ಶಿಡಗನಾಳ, ಶಂಕರ ಸುತಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net