ಹಾವೇರಿ: ರಾಣೆಬೆನ್ನೂರ ತಾಲೂಕಿನ ಚೌಡಯ್ಯದಾನಪುರದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ (ಗದ್ದುಗೆ) ಅಭಿವೃದ್ಧಿ ವಿಚಾರವಾಗಿ ಮತ್ತೆ ಎರಡು ಬಣಗಳ ನಡುವೆ ವೈಮನಸ್ಸು ಮೂಡಿದೆ. ಶುಕ್ರವಾರ ರಾತ್ರಿ ಗದ್ದುಗೆ ವೀಕ್ಷಣೆಗೆ ತೆರಳಿದ್ದ ಸಚಿವ ಎಚ್.ಕೆ.ಪಾಟೀಲರು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರಿಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ.
ರಾಣೆಬೆನ್ನೂರ ತಾಲೂಕಿನ ಪ್ರವಾಸಿ ತಾಣಗಳ ಪರಿಶೀಲನೆಗೆ ತೆರಳಿದ್ದ ಸಚಿವ ಎಚ್.ಕೆ.ಪಾಟೀಲರು ರಾತ್ರಿ ಹಾವೇರಿ ತಾಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಭೇಟಿ ನೀಡಿ, ಶ್ರೀಗಳೊಂದಿಗೆ ಚರ್ಚಿಸಿದರು. ನಂತರ ಸಚಿವರು ಶ್ರೀಗಳೊಂದಿಗೆ ಒಂದೇ ಕಾರಲ್ಲಿ ಐಕ್ಯಮಂಟಪಕ್ಕೆ ತೆರಳಿದ್ದರು. ಐಕ್ಯ ಮಂಟಪ ಅಭಿವೃದ್ಧಿಪಡಿಸದೇ ಕೇವಲ ಮಠವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೇಸರಗೊಂಡಿದ್ದ ಕೆಲ ಗ್ರಾಮಸ್ಥರು ಸ್ವಾಮೀಜಿ ಹಾಗೂ ಸಚಿವರ ಕಾರಿಗೆ ೇರಾವ್ ಹಾಕಿದರು. ಸ್ಥಳದಲ್ಲಿ ಎರಡು ಬಣ ಸೇರಿದ್ದರಿಂದ ಗೊಂದಲ ಉಂಟಾಗಿತ್ತು. ಸಚಿವರು, ಶಾಸಕರು ಗ್ರಾಮಸ್ಥರ ಮನವೊಲಿಸಲು ವಿಫಲರಾದರು. ಹಾಗಾಗಿ, ಸಚಿವರು, ಶ್ರೀಗಳು ಐಕ್ಯಮಂಟಪ ವೀಕ್ಷಿಸದೇ ವಾಪಸಾದರು.
-------------
ಸಚಿವರ ತಡೆದಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ
ಹಾವೇರಿ: ಐಕ್ಯಮಂಟಪದ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಯ ಜನರು, ನನಗೆ ಹಾಗೂ ಸಚಿವರಿಗೆ ಘೇರಾವ್ ಹಾಕಿ ವಾಪಸ್ ಕಳುಹಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಕ್ಯಮಂಟಪದ ಅಭಿವೃದ್ಧಿ ಹಾಗೂ ಪ್ರತ್ಯೇಕ ಪ್ರಾಧಿಕಾರದ ರಚನೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದೇ ವಿಚಾರವಾಗಿ ಸಚಿವ ಎಚ್.ಕೆ.ಪಾಟೀಲರೊಂದಿಗೆ ಸ್ಥಳ ಪರಿಶೀಲನೆಗೆ ಹೋಗುವಾಗ ಅಡ್ಡಿಪಡಿಸಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಇದು ಗುರುಪೀಠಕ್ಕೆ, ಸರ್ಕಾರಕ್ಕೆ ಹಾಗೂ ಭಕ್ತರಿಗೆ ಮಾಡಿದ ಅವಮಾನ. ಗದ್ದುಗೆ ಅಭಿವೃದ್ಧಿಪಡಿಸಲು ಹೋದಾಗಲ್ಲೆಲ್ಲ ವಿರೋಧವಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಪರ್ಯಾಯ ಸ್ವಾಮೀಜಿ ನೇಮಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ನಮ್ಮ ಸಮಾಜಕ್ಕೆ ಇರುವುದು ಒಂದೇ ಗುರುಪೀಠ. ಎಲ್ಲರನ್ನೂ ಸಮಾನತೆಯಿಂದ ಕೊಂಡೊಯ್ಯುವುದೇ ನಮ್ಮ ಉದ್ದೇಶ. ಅಸಮಾಧಾನಗಳಿದ್ದರೆ, ಸ್ಥಳೀಯರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಲಾಗುವುದು ಎಂದರು.
ಪುರಾತ್ವದ ಇಲಾಖೆಯ ಕೆಲ ನಿಯಮಗಳಿಂದ ಗದ್ದುಗೆ ಅಭಿವೃದ್ಧಿಗೆ ಅಡ್ಡಿಯಾಗಿದೆ. ಈ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಹೇಳಿದರು.
ಸಮುದಾಯದ ಪ್ರಮುಖರಾದ ಚಂದ್ರಪ್ಪ ಜಾಲಗಾರ, ಮಾಲತೇಶ ತಿಪ್ಪೆಗುಂಡಿ, ಬಸವರಾಜ ಕಳಸೂರು, ಪ್ರದೀಪ ಶೇಷಗಿರಿ, ಕರಬಸಪ್ಪ ಹಳದೂರ, ಇತರರಿದ್ದರು.