

ಹಾವೇರಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವುದು ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಸೆ.5ರಿಂದ ಅಕ್ಟೋಬರ್ 5ರವರೆಗೆ ದೇಶಾದ್ಯಂತ ‘ಭಾರತ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಒಪಿಎಸ್ ಜಾರಿಯಾಗುವವರೆಗೆ ಹೋರಾಟ ನಿರಂತರವಾಗಿರಲಿದೆ ಎಂದು ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಗುರು ಭವನದ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಪಿಎಸ್ ಜಾರಿಗೊಳಿಸುವುದು, ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಕೈಬಿಡುವುದು, ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಬದಲಿಗೆ ಖಾಯಂ ಶಿಕ್ಷಕರನ್ನು ನೇಮಿಸುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಏಕರೂಪ ವೇತನ ಜಾರಿಗೊಳಿಸುವ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.5ರಂದು ದೇಶದ ನಾಲ್ಕು ಕಡೆಗಳಲ್ಲಿ ಭಾರತ ಯಾತ್ರೆ ಆರಂಭವಾಗಿದ್ದು, ದೇಶಾದ್ಯಂತ ಸಂಚರಿಸಿ ಅಕ್ಟೋಬರ್ 5ರಂದು ನವದೆಹಲಿ ತಲುಪಲಿದೆ. ಅಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಸೆ.17ರಿಂದ ರ‌್ಯಾಲಿ ಆರಂಭವಾಗಿದ್ದು, ಸೆ.23ರಂದು ಮುಕ್ತಾಯಗೊಂಡಿದೆ ಎಂದರು.
ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಘಡ, ಪಂಜಾಬ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಒಪಿಎಸ್ ಚಾಲ್ತಿಯಲ್ಲಿದೆ. ಉಳಿದ ಎಲ್ಲ ರಾಜ್ಯಗಳಲ್ಲಿ ಎನ್‌ಪಿಎಸ್ ಜಾರಿಯಾಗಿದೆ. ಇದರಿಂದ ಲಕ್ಷಾಂತರ ಶಿಕ್ಷಕರು ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯದಲ್ಲೂ ಆದಷ್ಟು ಬೇಗ ಒಪಿಎಸ್ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ, ಜಿಲ್ಲಾಧ್ಯಕ್ಷ ಬಿ.ಪಿ.ಬಿದರಿ, ಜಿಲ್ಲಾ ಕಾರ್ಯದರ್ಶಿ ವಿಜಯೇಂದ್ರ ಯತ್ನಳ್ಳಿ, ಬಸವರಾಜ ಹಳೇಮನಿ, ಪ್ರಮೀಳಾ ಕರ್ಜಗಿ, ಇತರರಿದ್ದರು.