ಶೇ.1ರಷ್ಟು ಮೀಸಲಾತಿಗಾಗಿ ಭಿಕ್ಷೆ ಬೇಡಿದ ಅಲೆಮಾರಿಗಳು; ಸಿಎಂ ಭಾವಚಿತ್ರ ಹಿಡಿದು, ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ

22 HVR 10
Published on

ಹಾವೇರಿ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಅಲೆಮಾರಿ ಸಮುದಾಯವನ್ನು ನಿರ್ಲಕ್ಷಿಸಿದೆ. ಒಳಮೀಸಲಾತಿ ಜಾರಿ ಮಾಡುವ ವೇಳೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 49 ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಜಾತಿಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಹಾಗೂ ಅಲೆಮಾರಿಗಳಿಗೆ ಶೇ.1ರಷ್ಟು ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಅಲೆಮಾರಿಗಳು ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.

ಹಾವೇರಿ ಜಿಲ್ಲಾ ಅಲೆಮಾರಿ ಸಮುದಾಯದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ಶೇ.1ರಷ್ಟು ಮೀಸಲಾತಿ ನೀಡುವಂತೆ ಭಿಕ್ಷೆ ಬೇಡುವ ಮೂಲಕ ಅಲೆಮಾರಿಗಳು ಆಕ್ರೋಶ ಹೊರಹಾಕಿದರು.

ನೂರಾರು ಅಲೆಮಾರಿಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳನ್ನು ತೊಟ್ಟು, ಶಂಖ, ಜಾಗಟೆಗಳೊಂದಿಗೆ, ಮಹಿಳೆಯರು ಮಕ್ಕಳೊಂದಿಗೆ ತಟ್ಟೆ, ಚೊಂಬು, ಅಡುಗೆ ಪಾತ್ರೆಗಳನ್ನು ಹಿಡಿದು ಅರ್ಧಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ಹಿಡಿದು ತಮಗೆ ಶೇ.1ರಷ್ಟು ಮೀಸಲಾತಿ ಭಿಕ್ಷೆ ನೀಡುವಂತೆ ಒತ್ತಾಯಿಸಿದರು.

ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ದತ್ತಾಂಶ ಸಂಗ್ರಹಿಸಿದ ನ್ಯಾ.ನಾಗಮೋಹನ ದಾಸ್ ಏಕ ಸದಸ್ಯ ಆಯೋಗವು ಈ ಜಾತಿಗಳ ಜನರಿಗೆ ಪ್ರತ್ಯೇಕ ಗುಂಪು ಸೃಷ್ಟಿಸಿ, ಶೇ.1ರಷ್ಟು ಒಳಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ, ರಾಜ್ಯ ಸರ್ಕಾರ, ಇದನ್ನು ಕಡೆಗಣಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

49 ಅಲೆಮಾರಿ ಸಮುದಾಯದವರಿಗೆ ಅಕ್ಷರ ಜ್ಞಾನವೇ ಇಲ್ಲವಾಗಿದೆ. ಈಗಲೂ ಸಹ ಅಲೆಮಾರಿಗಳು ಮನೆ-ಮಠಗಳಿಲ್ಲದೇ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಭಿಕ್ಷೆ ಬೇಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ವಾಸ್ತವ ಸ್ಥಿತಿ ಹೀಗಿರುವಾಗ ಅಲೆಮಾರಿಗಳು ಆ ಸಮುದಾಯಗಳ ಜನರೊಂದಿಗೆ ಪೈಪೋಟಿ ನಡೆಸಿ ಮೀಸಲು ಪಡೆಯುವುದು ಕಷ್ಟ ಸಾಧ್ಯ. ಹಾಗಾಗಿ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗ ಮರೀಚಿಕೆಯಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು, ಇಲ್ಲದೇ ಹೋದರೆ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆದಿಜಾಂಬವ ಮಾದಿಗ ಸಮಾಜದ ಪ್ರಮುಖ ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿದರು.

ಸಮುದಾಯದ ಅಧ್ಯಕ್ಷ ಶೆಟ್ಟಿ ವಿಭೂತಿ, ಮಾಲತೇಶ ಯಲ್ಲಾಪುರ, ಜಂಬಣ್ಣ ಮಿರಿಯಾಲಿ, ಭಿಕ್ಷಾಪತಿ ಮೋತಿ, ಈರಣ್ಣ ಮೋತಿ, ದುರಗವ್ವ ಬಾದಗಿ, ಶಂಕ್ರಪ್ಪ ಮಹಾಂತ, ಮಂಜಪ್ಪ ಬಾದಗಿ, ಮಾರೆಪ್ಪ ಮೋತಿ, ಲಕ್ಷ್ಮಣ ಶಿರಶಾಲ, ಲಿಂಗರಾಜ ಮಿರಿಯಾಲಿ, ಸುರೇಶ ಚಲವಾದಿ, ದುರಗಪ್ಪ ಮೋತಿ, ಮಂಜೇಶ ಮಿರಿಯಾಲಿ, ಮಾರೇಶ ಕೊಂಡ್ರ, ಪ್ರಜ್ವಲ ಶೆಟ್ಟಿ ವಿಭೂತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net