ಟೆಂಟ್ ಮುಕ್ತ ಕರ್ನಾಟಕ ನಿಗಮದ ಗುರಿ; ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿಕೆ

6 HVR 6
Published on

ಹಾವೇರಿ: ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ದೇಶ ಹಾಗೂ ರಾಜ್ಯದ ಮೂಲೆಗಳಲ್ಲಿ ಅಲೆಮಾರಿ ಜನಾಂಗ ಇಂದಿಗೂ ನೆಲೆ ಮತ್ತು ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದೆ. ಅವರಿಗೆ ನಿವೇಶನ ಮತ್ತು ಮನೆ ಸೌಲಭ್ಯ ಕಲ್ಪಿಸುವ ಮೂಲಕ ‘ಟೆಂಟ್ ಮುಕ್ತ ಕರ್ನಾಟಕ’ ಮಾಡುವುದು ನಿಗಮದ ಗುರಿಯಾಗಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ವಂಚಿತವಾಗಿರುವುದು ನೋವಿನ ಸಂಗತಿಯಾಗಿದೆ. ತಮ್ಮದೇ ಕಲೆ, ಸಂಸ್ಕೃತಿ, ವೃತ್ತಿ ಮಾಡಿಕೊಂಡು ಬದುಕಿತ್ತಿರುವ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕಿದೆ ಎಂದರು.

ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲೆಮಾರಿ ಜನಾಂಗದ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಉಳಿದ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಮಾರ್ಚ್ 12ರೊಳಗೆ ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ, ಇತರರು ಉಪಸ್ಥಿತರಿದ್ದರು.

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ:

ಧ್ವನಿ ಇಲ್ಲದ, ಅವಕಾಶ ವಂಚಿತರಾದ ಅಲೆಮಾರಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮಾತೃ ಹೃದಯದಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಅಲೆಮಾರಿ ಜನಾಂಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ರಹಿತವಾಗಿ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೆರೆ ಅಂಚಲ್ಲಿ ಶಿಳ್ಳೆಕ್ಯಾತರ ಬದುಕು

ಸವಣೂರ ತಾಲೂಕಿನ ಡಂಬೂರಮತ್ತೂರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು 75 ವರ್ಷಗಳಿಂದ 45 ಶಿಳ್ಳೆಕ್ಯಾತರ ಕುಟುಂಬಗಳು ಕೆರೆ ಪ್ರದೇಶದಲ್ಲಿ ವಾಸವಾಗಿವೆ. ಅವರಿಗೆ ಹಕ್ಕುಪತ್ರ ಇಲ್ಲ ಹಾಗೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮದ ಸರ್ವೇ 26 ರಲ್ಲಿ ಸರ್ಕಾರದ 22 ಎಕರೆ ಜಮೀನಿನಲ್ಲಿ ಇವರಿಗೆ ಮನೆ ನಿರ್ಮಾಣಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಯವರು ಜಮೀನು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಹಾಗೂ ನಿಗಮಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಲ್ಲವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net