ಅಲೆಮಾರಿ ಮಕ್ಕಳಿಗೆ ಹಾಲುಣಿಸಿ ಪಂಚಮಿ ಆಚರಣೆ

Published on

ಹಾವೇರಿ: ಮಾನವ ಬಂಧುತ್ವ ವೇದಿಕೆ, ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಬಸವ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಹೊರವಲಯ ಗಣಜೂರು ರಸ್ತೆಯ ಶಾಂತಿನಗರದ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲುಣಿಸುವ ಮೂಲಕ ಹಬ್ಬ ಆಚರಿಸಲಾಯಿತು. 50ಕ್ಕೂ ಹೆಚ್ಚು ಮಕ್ಕಳಿಗೆ ಹಾಲು, ಉಂಡು ವಿತರಿಸಲಾಯಿತು.
ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಹಬ್ಬದ ಹೆಸರಿನಲ್ಲಿ ಮೌಢ್ಯಾಚರಣೆ ಮತ್ತು ಆಹಾರ ವಸ್ತುಗಳ ವ್ಯರ್ಥವಾಗುವುದನ್ನು ತಡೆಯಬೇಕು. ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹೀಗಿದ್ದರೂ ಹಾಲಿಗೆ ಹಾಲು ಎರೆದು ಹಾಳು ಮಾಡುವುದಕ್ಕಿಂತ ಬಡ ಮಕ್ಕಳಿಗೆ ಹಾಲುಣಿಸುವುದು ಶ್ರೇಷ್ಠ ಎಂದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ, ಸತೀಶ ಜಾರಿಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಬಡಮ್ಮನವರ, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ದಲಿತ ಮುಖಂಡರಾದ ಎನ್.ಎನ್. ಗಾಳೆಮ್ಮನವರ, ರಮೇಶ ಜಾಲಿಹಾಳ, ಮಲ್ಲೇಶಪ್ಪ ಕಡಕೋಳ, ಮಲ್ಲಿಕಾರ್ಜುನ ಬೂದಗಟ್ಟಿ, ಶಿವರಾಜ ಹರಿಜನ, ಗುಡ್ಡಪ್ಪ ಬಣಕಾರ, ಸಂಗಪ್ಪ ಮಲ್ಲಿಗಾರ, ಈರಪ್ಪ ತಳವಾರ, ಆಕಾಶ ಮಂಟಗಣಿ, ಮಾಲತೇಶ ಅಂಗೂರ, ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net