ಪಟಾಕಿ ಗೋಡಾಮಿನಲ್ಲಿ ಅಗ್ನಿ ದುರಂತ ಮೂವರು ಸಜೀವ ದಹನ; ಕೋಟ್ಯಂತರ ರೂ. ಮೌಲ್ಯದ ಮದ್ದು ನಾಶ; ಮುಂದುವರೆದ ಕಾರ್ಯಾಚರಣೆ

Fire 2
Published on

ಹಾವೇರಿ: ನಗರದ ಹೊರವಲಯ ಆಲದಕಟ್ಟಿ ಸಮೀಪದ ಪಟಾಕಿ ಗೋಡಾಮಿನಲ್ಲಿ ಅಗ್ನಿ ದುರಂತ ಸಂಭವಿಸಿ ಮೂವರು ಸಜೀವವಾಗಿ ದಹನಗೊಂಡು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ. ಘಟನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಪಟಾಕಿ ಸುಟ್ಟು ಕರಕಲಾಗಿದೆ. ಮೃತರನ್ನು ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಎನ್ನಲಾಗಿದೆ. ಹರಿಹರ ತಾಲೂಕಿನ ವಾಸೀಂ ಶಫಿ ಅಹ್ಮದ್ ಹಾಗೂ ಶೇರು ಮಾಳಪ್ಪ ಕಟ್ಟಿಮನಿ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡಾಮು ಪಕ್ಕದ ಮನೆಯ ಕಲಾವತಿ ಎಂಬುವರು ಮೂರ್ಛೆ ಹೋಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೀರೇಶ ಸಾತೇನಹಳ್ಳಿ ಎಂಬುವರಿಗೆ ಸೇರಿದ ಭೂಮಿಕಾ ಪಟಾಕಿ ಗೋಡಾಮಿನಲ್ಲಿ ನಾಲ್ಕೈದು ದಿನಗಳ ಹಿಂದೆಯಷ್ಟೇ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಪಟಾಕಿ ಸಂಗ್ರಹಿಸಿ ಇಡಲಾಗಿತ್ತು. ಗೋಡಾಮಿನ ಹೊರಭಾಗದಲ್ಲಿ ಮಂಗಳವಾರ ಗೇಟ್ ಅಳವಡಿಕೆ ಮತ್ತಿತರ ಕೆಲಸ ನಡೆಸಲಾಗಿತ್ತು. ಈ ವೇಳೆ ವೆಲ್ಡಿಂಗ್ ಮಾಡುವಾಗ ಅದರ ಕಿಡಿ ಗೋಡಾಮಿನಲ್ಲಿದ್ದ ಪಟಾಕಿಗೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಇನ್ನೂ ಇಬ್ಬರು ಗೋಡಾಮಿನಲ್ಲಿ ಇರುವ ಶಂಕೆ ವ್ಯಕ್ತವಾಗಿದೆ. ಐದು ಬೈಕ್ ಸುಟ್ಟಿವೆ. ಸ್ಥಳಕ್ಕೆ ಧಾವಿಸಿದ ಜಿಲ್ಲೆಯ ವಿವಿಧ ಅಗ್ನಿಶಾಮಕ ಠಾಣೆಗಳ ಅಧಿಕಾರಿ, ಸಿಬ್ಬಂದಿ ಬೆಳಗ್ಗೆ 11 ಗಂಟೆಯಿಂದ ರಾತ್ರಿವರೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ರಾತ್ರಿವರೆಗೂ ಪಟಾಕಿ ಸಿಡಿಯುವ ಸದ್ದು ಕಂಡುಬಂತು.
ಹಾವೇರಿ ಹಾನಗಲ್ಲ ರಸ್ತೆಯ ಪಕ್ಕದಲ್ಲೇ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ರಸ್ತೆವರೆಗೆ ಮೈಚಾಚಿಕೊಂಡಿತ್ತು. ಹತ್ತಾರು ಕಿಮೀವರೆಗೆ ಹೊಗೆ ಆವರಿಸಿತ್ತು. ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದರು. ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಎಸ್‌ಪಿ ಡಾ.ಶಿವಕುಮಾರ ಗುಣಾರೆ, ಜಿಪಂ ಸಿಇಒ ಅಕ್ಷಯ ಶ್ರೀಧರ, ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಕೋಟ್
ಮಾಹಿತಿ ಪ್ರಕಾರ ಐವರು ನಾಪತ್ತೆ ಎಂದು ಗೊತ್ತಾಗಿದ್ದು, ಅದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆ ಮುಂದುವರೆದಿದ್ದು, ಗೋಡಾಮಿಗೆ ಪರವಾನಗಿ ಇತ್ತೋ, ಇಲ್ಲವೋ ಎಂಬ ಕುರಿತು ಕಾರ್ಯಾಚರಣೆ ಮುಗಿದ ಬಳಿಕ ಪರಿಶೀಲಿಸಲಾಗುವುದು.
> ಡಾ.ಶಿವಕುಮಾರ ಗುಣಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net