ಪಟಾಕಿ ಗೋದಾಮು ಅಗ್ನಿ ದುರಂತದ ತನಿಖೆ; ರಾಜ್ಯದಲ್ಲಿ ಭವಿಷ್ಯದಲ್ಲಿ ಅವಘಡ ಸಂಭವಿಸದಂತೆ ಕ್ರಮ; ಸಚಿವ ಶಿವಾನಂದ ಪಾಟೀಲ

30 HVR 1 A
Published on

ಹಾವೇರಿ: ತಾಲೂಕಿನ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿರುವುದು ದುರಾದೃಷ್ಟಕರ. ಈ ಘಟನೆಯ ಸಮಗ್ರ ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಂತಹ ಅವಘಡ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾವೇರಿಯಿಂದಲೇ ಕಟ್ಟುನಿಟ್ಟಿನ ಮುಂಜಾಗ್ರತೆ ಆರಂಭಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ, ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೃತಪಟ್ಟ ನಾಲ್ವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇಬ್ಬರು ಗಾಯಾಳುಗಳನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುವುದು. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಅಗ್ನಿಶಾಮಕ ಇಲಾಖೆ ವರದಿ ಪ್ರಕಾರ 500ರಿಂದ 1000 ಕೆಜಿಗಿಂತ ಹೆಚ್ಚು ಪಟಾಕಿ ದಾಸ್ತಾನು ಇಡಬಾರದು ಎಂಬ ಕಾನೂನು ಇದೆ. ಅದನ್ನು ಮೀರಿ ಹೆಚ್ಚುವರಿ ಪಟಾಕಿ ಇಟ್ಟಿರುವುದು ಸಾಬೀತಾಗಿದೆ. ಅನಾಹುತ ಸಂಭವಿಸಿದಾಗ ಹೊರಗೆ ಹೋಗಲು ಎಮರ್ಜೆನ್ಸಿ ವಿಂಡೋ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆಯನ್ನೂ ಮಾಲೀಕರು ಮಾಡಿಲ್ಲ.ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಅಂಶಗಳ ಬಗ್ಗೆ ತನಿಖೆ ಯಾರಿಂದ ಮಾಡಿಸಬೇಕು ಎಂಬ ಕುರಿತು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದು ವಿವರಿಸಿದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಎಸ್‌ಪಿ ಶಿವಕುಮಾರ ಗುಣಾರೆ, ಜಿಪಂ ಸಿಇಒ ಅಕ್ಷಯ ಶ್ರೀಧರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮತ್ತಿತರರು ಇದ್ದರು.
ಗೋದಾಮು ಅನುಮತಿ ಪರಿಶೀಲನೆ
ಪಟಾಕಿ ಮಾರಾಟಕ್ಕೆ ಮಾಲೀಕರು 2020ರಲ್ಲೇ ಅನುಮತಿ ಪಡೆದಿದ್ದಾರೆ. ಲೈಸನ್ಸ್ ರಿನಿವಲ್ ಮಾಡಲು ಎರಡು ತಿಂಗಳು ತಡವಾಗಿ ಜಿಲ್ಲಾಧಿಕಾರಿ ಬಳಿ ಅರ್ಜಿ ಕೊಟ್ಟಿದ್ದಾರೆ. ಒಮ್ಮೆ ಅರ್ಜಿ ಕೊಟ್ಟರೆ ನವೀಕರಣಕ್ಕೆ ಅರ್ಹ ಎಂಬುದಾಗುತ್ತದೆ. ಪಟಾಕಿ ಮಾರಾಟಕ್ಕೆ ಅನುಮತಿ ಪಡೆದು ಅಕ್ರಮವಾಗಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತೇನೆ ಎಂದು ಸಚಿವ ಪಾಟೀಲ ಹೇಳಿದರು.
ಸಾರ್ವಜನಿಕರಿಂದ ಆಕ್ಷೇಪ
ಜನವಸತಿ ಪ್ರದೇಶದಲ್ಲಿ ಪಟಾಕಿ ಗೋದಾಮಿಗೆ ಅನುಮತಿ ನೀಡಿರುವ ಕುರಿತು ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಅನುಮತಿ ಕೊಡಲೇಬಾರದು. ಇದನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ನೋಟಿಸ್ ಕೊಟ್ಟಿತ್ತು ಎಂದು ಗೊತ್ತಾಗಿದೆ. ಯಾರು ಅನುಮತಿ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸಚಿವ ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net