

ಹಾವೇರಿ: ಬಿಸಿಯೂಟ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯಲೋಪ ಆರೋಪದಡಿ ಹಾವೇರಿ ತಾಲೂಕಿನ ಅಕ್ಷರ ದಾಸೋಹ ನಿರ್ದೇಶಕಿ ಪುಷ್ಪಲತಾ ಬಿದರಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಅಗಡಿ ಗ್ರಾಮದ ಶ್ರೀ ಗುರು ರುದ್ರಮುನಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಆಹಾರ ಧಾನ್ಯದ ಕೊರತೆಯಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಳಿಸಲಾಗಿದ್ದು, ಮಕ್ಕಳಿಗೆ ಮನೆಯಿಂದ ಉಪಾಹಾರ ತರುವಂತೆ ಸೂಚಿಸಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿತ್ತು. ಇದನ್ನು ಪರಿಶೀಲಿಸಿದಾಗ ಯೋಜನೆಯ ಅನುಷ್ಠಾನದಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಕಂಡು ಬಂದಿತ್ತು. ಹಾಗಾಗಿ, ಎಒ ಪುಷ್ಪಲತಾ ಬಿದರಿ ಅವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
ಎಲ್ಲ ಶಾಲೆಗಳಲ್ಲಿ ಬಿಸಿಯೂಟ ಚಾಲ್ತಿಯಲ್ಲಿದೆ
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಕಾರ್ಯಕ್ರಮ ಅನುಷ್ಠಾನದಲ್ಲಿದೆ. ಲಭ್ಯವಿರುವ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಆ.23ರಂದು ಜಿಲ್ಲೆಯ ಎಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಭೆ ನಡೆಸಿ, ಯಾವುದೇ ಶಾಲೆಯಲ್ಲಿ ಯೋಜನೆ ನಿಲ್ಲದಂತೆ ಕ್ರಮವಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.