ಅಕ್ಕಿಆಲೂರ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ; ಜಿಲ್ಲೆಯ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆ

Akkialure
Published on

ಅಕ್ಕಿಆಲೂರ: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಕ್ಬುಲ್ ಸಾಬ್ ರೂಸ್ತುಮಖಾನವರ ಪಠಾಣ ಅಧ್ಯಕ್ಷರಾಗಿ ಮತ್ತು ಶೇಖವ್ವ ಬಸವಂತಪ್ಪ ತಳವಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
31 ಸದಸ್ಯರ ಬಲದ ಅಕ್ಕಿಆಲೂರ ಗ್ರಾಪಂನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮೀಸಲಾತಿ ಇತ್ತು. 17 ಕಾಂಗ್ರೆಸ್ ಮತ್ತು 14 ಬಿಜೆಪಿ ಬೆಂಬಲಿತ ಸದಸ್ಯರ ಬಲ ಇದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಕ್ಬುಲ್ ಸಾಬ್ ಪಠಾಣ ಮತ್ತು ಬಿಜೆಪಿಯಿಂದ ಅಲ್ತಾಫ್ ಹಮೀದಸಾಬ್ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶೇಖವ್ವ ತಳವಾರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಗೌಪ್ಯ ಮತದಾನದಲ್ಲಿ ಮಕ್ಬುಲ್ ಸಾಬ್ ಪಠಾಣ 20 ಮತಗಳನ್ನು ಪಡೆದು ಅಧ್ಯಕ್ಷರಾದರೆ, ಅಲ್ತಾಫ್ ಪಾಟೀಲ 11 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಶೇಖವ್ವ ತಳವಾರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಮುಖಂಡರಾದ ಟಾಕನಗೌಡ ಪಾಟೀಲ, ಎಂ.ಎಚ್ ಬ್ಯಾಡಗಿ, ಸದಾಶಿವ ಬೆಲ್ಲದ, ಯಾಸೀರಖಾನ ಪಠಾಣ, ಸತ್ತಾರಸಾಬ್ ಅರಳೇಶ್ವರ, ಮತ್ತಿತರರು ಉಪಸ್ಥಿತರಿದ್ದರು.
ಅಡ್ಡ ಮತದಾನ, ಆಣೆ ಪ್ರಮಾಣ
ಗ್ರಾಪಂನಲ್ಲಿ 14 ಬಿಜೆಪಿ ಬೆಂಬಲಿತ ಸದಸ್ಯರು ಇದ್ದರೂ, ಚುನಾವಣೆ ವೇಳೆ ಮೂವರು ಸದಸ್ಯರು ಅಡ್ಡ ಮತದಾನ ಮಾಡಿದರು. ಒಂದು ವೇಳೆ ಬಿಜೆಪಿಯ ಮೂರು ಮತಗಳನ್ನು ಬಿಜೆಪಿ ಅಧ್ಯಕ್ಷ ಅಭ್ಯರ್ಥಿ ಅಲ್ತಾಫ್ ಪಾಟೀಲ ಪಡೆದಿದ್ದರೂ, ಗೆಲುವು ಕಾಂಗ್ರೆಸ್‌ನ ಮಕ್ಬುಲ್ ಸಾಬ್ ಅವರಿಗೆ ಖಚಿತವಾಗಿತ್ತು. ಆದರೂ ಅಡ್ಡಮತದಾನ ಮಾಡಿದವರು ಯಾರು ಎಂಬುದು ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಗೊಂದಲ ನಿರ್ಮಾಣವಾಗಿತ್ತು.
ಹಾಗಾಗಿ, ತುರ್ತು ಸಭೆ ನಡೆಸಿ, ಯಾರು, ಯಾಕೆ ಅಡ್ಡಮತ ಚಲಾಯಿಸಿದರು ಎಂಬ ಸತ್ಯ ಕಂಡುಕೊಳ್ಳುವ ಪ್ರಯತ್ನ ನಡೆಯಿತಾದರೂ ಅದು ವಿಫಲವಾಯಿತು. ಬಳಿಕ ಸಮೀಪದ ಮಾಕೊಪ್ಪ ಬಳಿಯ ಭೂತೇಶ್ವರ ದೇವಸ್ಥಾನಕ್ಕೆ ತೆರಳಿದ 14 ಸದಸ್ಯರು ಭೂತೇಶ್ವರ ದೇವರ ಮೇಲೆ ಆಣೆ ಪ್ರಮಾಣ ಮಾಡಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net