ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ನೋಡಿ; ಅಕ್ಕನ ಬಳಗದ ಮಹಿಳಾ ದಿನಾಚರಣೆಯಲ್ಲಿ ಶಿಕ್ಷಕಿ ಶಕುಂತಲಾ ಹಂಪಿಮಠ

14 HVR 4
Published on

ಹಾವೇರಿ: ಮಹಿಳೆಯರನ್ನು ಪೂಜ್ಯನೀಯ ಭಾವನೆಯಿಂದ ನೋಡಬೇಕು. ಇಲ್ಲದಿದ್ದರೆ ಮಹಿಳೆಗೆ ಕೆಡಕಾದಾಗ ರಾಮಾಯಣ, ಮಹಾಭಾರತದಂತಹ ಘಟನೆಗಳು ನಡೆದು ಹೋಗುತ್ತವೆ ಎಂದು ಶಿಕ್ಷಕಿ ಶಕುಂತಲಾ ಹಂಪಿಮಠ ಹೇಳಿದರು.

ಹುಕ್ಕೇರಿ ಮಠದ ಅಕ್ಕನ ಬಳಗದ ವತಿಯಿಂದ ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಹೆಣ್ಣು ಮಕ್ಕಳಿಗೆ ಯಾಕೆ ಕೈಕುಲುಕುವುದಿಲ್ಲ’ ಎಂದು ವಿವೇಕಾನಂದರಿಗೆ ಇಂಗ್ಲೆಂಡಿನ ಜನರು ಕೇಳಿದಾಗ, ನಾವು ನಮ್ಮ ನಮ್ಮ ದೇಶದ ಮಹಿಳೆಯರನ್ನು ನಿಮ್ಮ ರಾಣಿಯಂತೆ ಪೂಜ್ಯನೀಯ ಭಾವನೆಯಿಂದ ಗೌರವಿಸುತ್ತೇವೆ ಎಂದು ವಿವೇಕಾನಂದರು ಉತ್ತರಿಸಿದ್ದರು ಎಂದರು.

ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಮಾತನಾಡಿ, ಮಹಿಳೆಯರ ಯಶಸ್ಸಿಗೆ ಸರಿಯಾದ ಮಾರ್ಗ ತೋರಿಸಿದರೆ ಅವರು ಅತ್ಯುತ್ತಮವಾಗಿ ಸಾಧನೆ ಮಾಡುತ್ತಾರೆ. ತಮ್ಮ ಜತೆಗೆ ಇರುವವರನ್ನೂ ಬೆಳೆಸುತ್ತಾರೆ. ಇದುವೇ ಶ್ರೀಶಕ್ತಿ ಎಂದು ಹೇಳಿದರು.

ಅಕ್ಕನ ಬಳಗದ ಗೌರವಾಧ್ಯಕ್ಷೆ ಲಲಿತಮ್ಮ ಹೊರಡಿ ಹಾಗೂ ರಾಜೇಶ್ವರಿ ಬಿಷ್ಟನಗೌಡ್ರು ಮಾತನಾಡಿದರು. ಕಸ್ತೂರಮ್ಮ ಅಟವಾಳಗಿ, ಅಕ್ಕಮಹಾದೇವಿ ಬೆನ್ನೂರು, ಸುರೇಖಾ ಮಳಗಿ ಅವರನ್ನು ಸನ್ಮಾನಿಸಲಾಯಿತು.

ಹೇಮಾ ಮುದ್ದಿ, ಕಸ್ತೂರಮ್ಮ ಮಹಾರಾಜಪೇಟೆ, ಸ್ಮಿತಾ ಕುರುಬಗೊಂಡ, ಶಿವಲೀಲಾ ಸಿರಸಪ್ಪನವರ, ಕಮಲಾ ಬುಕ್ಕಶೆಟ್ಟಿ, ಅರುಣಾ ಆರಣಿ, ಸುಮಾ ಗಡಾದ, ಮಂಜುಳಾ ಕಡ್ಡಿ, ಇತರರಿದ್ದರು. ರೇಖಾ ಮಾಗನೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net