

ಹಾವೇರಿ: ಸಕಲ ವಿದ್ಯೆ ಪಾರಂಗತಳಾಗಿದ್ದ ಬಿಜ್ಜಳ ಮಂತ್ರಿಯ ಮಗಳಾದ ಗಂಗಾಂಬಿಕೆಯು ಬಸವಣ್ಣನವರ ಪ್ರೀತಿಯ ಪತ್ನಿಯಾಗಿದ್ದರು. ಸಮಾಜಕ್ಕೆ ತನ್ನಿಂದ ಏನಾದರೂ ಕೊಡುಗೆ ಕೊಡಬೇಕೆನ್ನುವ ಆಶಯದಿಂದ ಪತಿಯ ಹೆಗಲಿಗೆ ಹೆಗಲು ಕೊಟ್ಟು ದಾಸೋಹ ಮಾಡುತ್ತಾ ಶಿವಶರಣೆಯರನ್ನ ಕಾಪಾಡಿಕೊಂಡು ಬಂದರು ಎಂದು ಓಂ ಶಕ್ತಿ ಜಾನಪದ ಕಲಾ ಸಂಸ್ಥೆ ಸಂಸ್ಥಾಪಕಿ ಶಶಿಕಲಾ ಅಕ್ಕಿ ಹೇಳಿದರು.
ಶ್ರೀ ಹುಕ್ಕೇರಿ ಮಠದ ಅಕ್ಕನ ಬಳಗದ ವತಿಯಿಂದ ನಗರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಗುರುವಾರ ‘ಅನುಭವ ಮಂಟಪದಲ್ಲಿ ಶಿವಶರಣೆಯರ ದರ್ಶನ’ ಎಂಬ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ಮೇಲೆ ನಿಷ್ಠೆ, ನಂಬಿಕೆ ಇಡುವ ಮೂಲಕ ನಾವು ಸಾವನ್ನಾದರೂ ಗೆಲ್ಲಬಹುದು ಎಂಬುದಕ್ಕೆ ಗಂಗಾಂಬಿಕೆಯ ಜೀವನದ ಮೌಲ್ಯಗಳೇ ಸಾಕ್ಷಿಯಾಗಿದೆ. ಶಿವಶರಣೆಯರಾದ ನೀಲಾಂಬಿಕೆ, ಅಕ್ಕಮಹಾದೇವಿ ಅವರು ಮಾಡಿದ ಕಾಯಕದಿಂದ ಎಲ್ಲರ ಮನದೊಳಗೂ ಜೀವಂತವಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದರು.
ಜ್ಞಾನ ಕುಟೀರದ ಸಂಸ್ಥಾಪಕಿ ಕೃಷ್ಣವೇಣಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ನಮ್ಮ ಅಂಗೈಯಲ್ಲಿರುತ್ತದೆ. ನಮ್ಮ ದೇಹದ ಎಲ್ಲ ಅಂಗಾಂಗಗಳು ನಮ್ಮ ಎರಡೂ ಕೈಗಳಲ್ಲಿ ಇರುತ್ತವೆ ಎಂಬುದನ್ನು ಪ್ರಾಯೋಗಕವಾಗಿ ತೋರಿಸಿಕೊಟ್ಟರು. ಯೋಗ, ಧ್ಯಾನ ಮಾಡುವುದರಿಂದ ಒಳಗಣ್ಣಿನಿಂದ ಸತ್ಯ, ಅಸತ್ಯಗಳನ್ನು ಕಾಣಬಹುದು. ಪ್ರಾಣವಾಯುವಿನ ಸರಿಯಾದ ಕ್ರಮಗಳನ್ನು ಅನುಸರಿಸಿದರೆ ದೀರ್ಘಾಯುಷ್ಯರಾಗಿ ಬಾಳಬಹುದು ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕಸ್ತೂರಮ್ಮ ಮಹಾರಾಜಪೇಟೆ, ರಾಜೇಶ್ವರಿ ಸಂಶಿ, ಮತ್ತಿತರರು ಪಾಲ್ಗೊಂಡಿದ್ದರು. ಮಂಜುಳಾ ಕಡ್ಡಿ ಸ್ವಾಗತಿಸಿದರು. ರೇಖಾ ಕುರುಬಗೊಂಡ ಶೆಟ್ಟರ್ ವಂದಿಸಿದರು. ರೇಖಾ ಮಾಗನೂರ ನಿರೂಪಿಸಿದರು.