

ಹಾವೇರಿ: ರಾಣೆಬೆನ್ನೂರ ತಾಲೂಕು ಐರಾವತ ಐರಣಿ ಹೊಳೆಮಠ ಮಹಾಸಂಸ್ಥಾನದಲ್ಲಿ ಫೆ.8ರಿಂದ 10ರವರೆಗೆ ಸ್ವಾಮೀಜಿಯ ಪಟ್ಟಾಭಿಷೇಕ, ಸನ್ಯಾಸ ದೀಕ್ಷೆ ಮಹೋತ್ಸವ, ನಾಣ್ಯಗಳ ತುಲಾಭಾರ ಹಾಗೂ ಧರ್ಮಸಭೆ ಆಯೋಜಿಸಲಾಗಿದೆ ಶಾಸಕ ಹಾಗೂ ಶ್ರೀಮಠದ ಟ್ರಸ್ಟಿ ರುದ್ರಪ್ಪ ಲಮಾಣಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.8ರಂದು ಬೆಳಗ್ಗೆ 6.30ಕ್ಕೆ ಶ್ರೀ ಸಿದ್ದಾರೂಢ ಮಂಟಪ ಹಾಗೂ ಮುಪ್ಪಿನಾರ್ಯ ಸ್ವಾಮೀಜಿ ವೇದಿಕೆಯಲ್ಲಿ ಅಖಂಡ ಶಿವಭಜನೆ ಪ್ರಾರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ಪರಮಪೂಜ್ಯರ 75ನೇ ಜನ್ಮದಿನದ ನಿಮಿತ್ತ 75 ಕುಟುಂಬದವರಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ನಡೆಸಲಿದ್ದಾರೆ. ಸಂಜೆ 6ಕ್ಕೆ ಧರ್ಮಸಭೆ ನಡೆಯಲಿದೆ ಎಂದರು.
ಫೆ.9ರಂದು ಬೆಳಗ್ಗೆ ಹಾಗೂ ಸಂಜೆ ವೇಳೆ ತುಲಾಭಾರ ನಡೆಯಲಿದ್ದು, ಸಂಜೆ 6ಕ್ಕೆ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಹುಬ್ಬಳ್ಳಿಯ ಸಿದ್ದಾರೂಢರ ಜ್ಯೋತಿ ರಥಯಾತ್ರೆಯನ್ನು ಸಂತರ, ಭಕ್ತರ ಸಮ್ಮುಖದಲ್ಲಿ ಸ್ವಾಗತಿಸಲಾಗುವುದು. ಫೆ.10ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಚಿದ್ಘಾನಾನಂದ ಭಾರತಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾತ್ಮಾಜಿಯವರು ಮತ್ತು ಸಿದ್ದಾರೂಢ ಸ್ವಾಮಿಗಳಿಗೆ ಸನ್ಯಾಸ ದೀಕ್ಷೆ ನೀಡುವ ಕಾರ್ಯಕ್ರಮ ಜರುಗಲಿದೆ. ನಂತರ ಮಠದಲ್ಲಿ ನೂತನ ಪಟ್ಟಾಧ್ಯಕ್ಷರ ಉತ್ಸವ ಜರುಗಲಿದೆ.
ಬೆಳಗ್ಗೆ 10.30ಕ್ಕೆ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ನೂತನ ಪಟ್ಟಾಧ್ಯಕ್ಷರ ಸಾನ್ನಿಧ್ಯದಲ್ಲಿ ಧರ್ಮಸಭೆ ಆರಂಭವಾಗಲಿದೆ. ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸತೀಶ ಮಲ್ಲನಗೌಡರ, ಪ್ರಶಾಂತ ಸುರಣಗಿ, ಸಂತೋಷ ಸುರಣಗಿ, ಅಣ್ಣಪ್ಪ ಸಂಪಾಳಿ, ಇತರರಿದ್ದರು.
ಗೋಶಾಲೆ ಉದ್ಘಾಟನೆ
ಉತ್ಸವದ ಸಂದರ್ಭದಲ್ಲಿ ಶ್ರೀಮಠದಲ್ಲಿ ಪಂಚಮ ದೇವಸ್ಥಾನ, ಗುರುನಾಥ ಮರುನಾಥ ಮಂದಿರ, ಈಶ್ವರ ದೇವರ ಮೂರ್ತಿ, ದತ್ತಾತ್ರೇಯ ದೇಗುಲವನ್ನು ಒಳಗೊಂಡ ಧ್ಯಾನ ಮಂದಿದ ಉದ್ಘಾಟಿಸಲಾಗುವುದು. 250 ಗೋವುಗಳುಳ್ಳ ಗೋಶಾಲೆಯನ್ನು ಉದ್ಘಾಟಿಸಲಾಗುವುದು ಎಂದು ಐರಣಿ ಹೊಳೆ ಮಠದ ಧರ್ಮದರ್ಶಿ ಬಾಬಣ್ಣ ಶೆಟ್ಟರ್ ತಿಳಿಸಿದರು.