ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿ; ಶಿಕ್ಷಣ ಇಲಾಖೆಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಗ್ರಹ

6 HVR 9 A
Published on

ಹಾವೇರಿ: ಜಿಲ್ಲೆಯ ಅನುದಾನಿತ ಶಾಲಾ- ಕಾಲೇಜ್‌ಗಳಲ್ಲಿ 2015ರಿಂದ 2020ರವರೆಗೆ ನಿಧನ ಹೊಂದಿದ ಹಾಗೂ ನಿವೃತ್ತಿಯಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶಿಸಿದ್ದು, ಶಿಕ್ಷಣ ಇಲಾಖೆ ಪಾರದರ್ಶಕವಾಗಿ, ವೇಗವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಸಭೆ ನಡೆಸಿದ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಕುರಿತು ಚರ್ಚಿಸಿದರು. ಈ ಅವಧಿಯಲ್ಲಿ ತೆರವಾದ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಆದೇಶ ಇದ್ದರೂ ಒಳ ಮೀಸಲಾತಿ ಕಾರಣದಿಂದ 10 ತಿಂಗಳಿಂದ ತಾತ್ಕಾಲಿವಾಗಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಒಳ ಮೀಸಲಾತಿಇಗಧಿಯಾಗಿದ್ದು, ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶ ಮಾಡಿದ್ದು, 3 ತಿಂಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಆದೇಶ ಮಾಡಿದೆ.

ಸರ್ಕಾರಕ್ಕೆ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ. ಶಿಕ್ಷಣ ಇಲಾಖೆ ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ಪಾರದರ್ಶಕ ಮತ್ತು ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.

ಸಭೆಯಲ್ಲಿ ಒಕ್ಕೂಟದ ಪ್ರಮುಖರಾದ ಡಿ.ಎಸ್.ಬಳ್ಳಾರಿ, ಡಾ.ಆರ್.ಎಂ.ಕುಬೇರಪ್ಪ, ಎಸ್.ಎಸ್.ಮುಷ್ಠಿ, ಮಲ್ಲಿಕಾರ್ಜುನ ಬಳ್ಳಾರಿ, ಬಸವರಾಜ ಹಾದಿಮನಿ, ಬಿ.ಎಸ್.ಅಕ್ಕಿವಳ್ಳಿ, ಸಿ.ಬಿ.ಕುರುವತ್ತಿಗೌಡ್ರ, ಶ್ರೀನಿವಾಸ ಸಾಹುಕಾರ, ಎಚ್.ಎ.ಹಾವೇರಿ, ಎಸ್.ಎಸ್.ಸಜ್ಜನರ, ಇತರರಿದ್ದರು.

ಪ್ರಾಥಮಿಕ ಶಾಲೆಗೂ ಆದೇಶವಾಗಲಿ

ಪ್ರೌಢಶಾಲೆಗಳು ಮತ್ತು ಕಾಲೇಜ್‌ಗಳ ಮಾದರಿಯಲ್ಲಿ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳನ್ನೂ ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಬೇಕು. ಅನುದಾನ ರಹಿತ ಶಾಕಾ- ಕಾಲೇಜ್‌ಗಳನ್ನು ಅನುದಾನಕ್ಕೆ ಒಳಪಡಿಸಲು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲು ಒಕ್ಕೂಟ ತೀರ್ಮಾನಿಸಿತು ಎಂದು ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net