ಸಿಎಂ ಬೆಂಬಲಿಸಿ ಅಹಿಂದ ಒಕ್ಕೂಟದಿಂದ ಜಾಥಾ ಅ.3ರಿಂದ; ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜನಜಾಗೃತಿ

Published on

ಹಾವೇರಿ: ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದ ಒಕ್ಕೂಟದಿಂದ ಅ.3ರಂದು ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೆ ಸಂವಿಧಾನ ಪೀಠಿಕೆ ಜ್ಞಾಪಕ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಮುಖಂಡ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರು ಅಧಿಕಾರ ನಡೆಸಲು ತೊಂದರೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ತೊಂದರೆ ನೀಡಿ ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರ ತರಲು ಹುನ್ನಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಅಹಿಂದ ನಾಯಕರ ಉಳಿವಿಗಾಗಿ, ಸಂವಿಧಾನದ ಪೀಠಿಕೆ ಇರಿಸಿಕೊಂಡು ಕ್ಯಾಂಟರ್ ವಾಹನದ ಮೂಲಕ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.
ಅಹಿಂದ ಒಕ್ಕೂಟದ ಕಾರ್ಯಾಧ್ಯಕ್ಷ ಗುರನಗೌಡ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಬೆಂಬಲಿಸಿ ಅ.3ರಂದು ಬೆಳಗ್ಗೆ 11.30ಕ್ಕೆ ಹುಬ್ಬಳ್ಳಿಯಿಂದ ಜಾಥಾ ಆರಂಭಗೊಳ್ಳಲಿದೆ. ಮಾರ್ಗ ಮಧ್ಯ ಶಿಗ್ಗಾಂವಿ, ದಾವಣಗೆರೆಯಲ್ಲಿ ಅಂಬೇಡ್ಕರ್, ಕಿತ್ತೂರ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಲಾಗುವುದು. ಅ.4ರಂದು ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಸಮಾವೇಶ ನಡೆಸಲಾಗುವುದು. ನಂತರ ಬೆಂಗಳೂರಿನ ವಿಧಾನಸೌಧ ತಲುಪಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಲಾಗುವುದು. ಸಂಜೆ 6ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಮಾವೇಶ ನಡೆಸಲಾಗುವುದು. ಜಾಥಾಕ್ಕೆ ಹಲವರು ಬೆಂಬಲ ನೀಡಿದ್ದು, ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ನಾಯಕರಾದ ಹನುಮಂತಪ್ಪ ಬಂಡಿವಡ್ಡರ, ಬಸವರಾಜ ಹಾದಿಮನಿ, ಉಡಚಪ್ಪ ಮಾಳಗಿ, ಮಹದೇವಗೌಡ, ಶ್ರೀಧರ ದೊಡ್ಡಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net