ಕೆಂಪುಕೋಟೆ ಧ್ವಜಾರೋಹಣಕ್ಕೆ ಮತ್ತಿಬ್ಬರು ಆಯ್ಕೆ; ಹಿರಿಯಮ್ಮನ ನಂತರ ಹಾವೇರಿಯ ಲೋಹಿತ, ಬ್ಯಾಡಗಿಯ ಚಂದನಾಗೂ ವಿಶೇಷ ಆಹ್ವಾನ

Published on

ಹಾವೇರಿ: ಪ್ರೇರಣಾ ಕಾರ್ಯಕ್ರಮದಡಿ ಆಯ್ಕೆಯಾಗಿ ಗುಜರಾತ್ ರಾಜ್ಯದ ವಡೋದರಾದ ಶಿಬಿರವೊಂದಕ್ಕೆ ತೆರಳಿದ್ದ ಜಿಲ್ಲೆಯ ಮತ್ತಿಬ್ಬರು ವಿದ್ಯಾರ್ಥಿಗಳು ದೆಹಲಿಯ ಕೆಂಪುಕೋಟೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.
ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚಂದನಾ ಬಿ. ಕೆಂಪಲಿಂಗಣ್ಣನವರ ಹಾಗೂ ಹಾವೇರಿ ನಗರದ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಲೋಹಿತ ಬಿ. ಕಟ್ಟಿಮನಿ ವಿಶೇಷ ಆಹ್ವಾನಿತರಾಗಿ ಆಯ್ಕೆಗೊಂಡಿದ್ದಾರೆ. ಇವರೊಂದಿಗೆ ತೆರಳಿದ್ದ ಬೆಂಗಾವಲು ಶಿಕ್ಷಕಿ ಮಾಸಣಗಿ ಸರ್ಕಾರಿ ಪ್ರೌಢಶಾಲೆಯ ಉಮಾದೇವಿ ಅವರೂ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇಬ್ಬರೂ ವಿದ್ಯಾರ್ಥಿಗಳು ಪ್ರೇರಣಾ ಕಾರ್ಯಕ್ರಮದಡಿ ಆಯ್ಕೆಯಾಗಿ ಗುಜರಾತ್ ರಾಜ್ಯದ ವಡೋದರಾದ ಶಿಬಿರವೊಂದಕ್ಕೆ ತೆರಳಿದ್ದರು. 10 ದಿನ ನಡೆದ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳುಳ್ಳ ಶಿಬಿರದಲ್ಲಿ ಕೆಲ ವಿದ್ಯಾರ್ಥಿಗಳನ್ನು ಕೆಂಪುಕೋಟೆ ಧ್ವಜಾರೋಹಣಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಜಿಲ್ಲೆಯಿಂದ ತೆರಳಿದ್ದ ಇಬ್ಬರೂ ಆತಯ್ಕೆಯಾಗಿದ್ದಾರೆ ಎಂದು ಡಯಟ್ ಪ್ರಾಚಾರ್ಯ ಗಿರೀಶ ಪದಕಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನಮ್ಮ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ದೊರೆತಿರುವುದು ಸಂತೋಷದ ವಿಚಾರವಾಗಿದೆ.
ಹಾವೇರಿ ತಾಲೂಕಿನ ಕೂರಗುಂದ ಪಿಎಂಶ್ರೀ ಪ್ರೌಢಶಾಲೆಯ ವಿದ್ಯಾರ್ಥಿನಿ ಹಿರಿಯಮ್ಮ ನರಸಪ್ಪ ಅಗಸರ ಹಾಗೂ ಬ್ಯಾಡಗಿ, ಹಾವೇರಿ ವಿದ್ಯಾರ್ಥಿಗಳು ಕೆಂಪುಕೋಟೆ ಧ್ವಜಾರೋಹಣಕ್ಕೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net