ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮವಹಿಸಿ; ಏಕ ಗವಾಕ್ಷಿ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ

14 HVR 5 B
Published on

ಹಾವೇರಿ: ಕೃಷಿ ತಳಿ ಸಂಶೋಧನಾ ಚಟುವಟಿಕೆ ಹಾಗೂ ಮೆಣಸಿನಕಾಯಿ, ಮೆಕ್ಕೆಜೋಳ ಹಾಗೂ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಆಧಾರಿತ ಸಣ್ಣ ಕೈಗಾರಿಕಾ ಘಟಕಗಳು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸುವ ಕುರಿತಂತೆ ರೈತರಿಗೆ ಹಾಗೂ ಬಂಡವಾಳ ಹೂಡಿಕೆದಾರರಿಗೆ ಉತ್ತೇಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕೃಷಿ ಆಧಾರಿತ ಆಹಾರ ಸಂಸ್ಕರಣೆ, ತಳಿ ಅಭಿವೃದ್ಧಿಯಂತಹ ಚಟುವಟಿಕೆಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸೂಕ್ತ ಯೋಜನೆ ರೂಪಿಸಲು ನಬಾರ್ಡ್‌ನ ಅಧಿಕಾರಿಗಳು ಹಾಗೂ ತೋಟಗಾರಿಕಾ ವಿಶ್ವ ವಿದ್ಯಾಲಯ, ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕಾ ಇಲಾಖಾ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ಸವಣೂರಲ್ಲಿ ಕೈಗಾರಿಕಾ ವಸಾಹತು :
ಸವಣೂರಿನಲ್ಲಿ ಹೊಸ ಕೈಗಾರಿಕಾ ವಸಾಹಾತು ಸ್ಥಾಪನೆಗೆ ಕನಿಷ್ಠ 50 ಎಕರೆ ಜಮೀನು ಗುರುತಿಸುವ ನಿಟ್ಟಿನಲ್ಲಿ ಕೆ.ಎ.ಎಸ್.ಎಸ್.ಐ.ಡಿ.ಸಿ. ಹಾಗೂ ತಾಲೂಕಿನ ತಹಶೀಲ್ದಾರ್ ಜತೆಗೆ ಜಂಟಿ ಸಭೆ ನಡೆಸಿ ಕ್ರಮವಹಿಸಿ. ಸವಣೂರ, ರಾಣೆಬೆನ್ನೂರ ಎರಡನೇ ಹಂತ ಹಾಗೂ ಹಿರೇಕೆರೂರಿನ ಕೈಗಾರಿಕಾ ವಸಾಹಾತುಗಳಲ್ಲಿ ಹಾಗೂ ಸವಣೂರಿನ ಕೈಗಾರಿಕಾ ವಸಾಹಾತುವಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತಂತೆ ತ್ವರಿತವಾಗಿ ಪ್ರಕ್ರಿಯೆ ಕೈಗೊಳ್ಳಲು ಸೂಚನೆ ನೀಡಿದರು.
ಹೊಸ ಕೈಗಾರಿಕಾ ಪ್ರಸ್ತಾವನೆ
ಸವಣೂರ ಕೈಗಾರಿಕಾ ವಲಯದಲ್ಲಿ ಜನರಲ್ ಇಂಜನಿಯರಿಂಗ್ ಹಾಗೂ ವುಡನ್ ವರ್ಕ್ ಘಟಕ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಾಣೆಬೆನ್ನೂರ ಹಾಗೂ ಬ್ಯಾಡಗಿಯಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಸ್ಥಾಪನೆಗೆ ಸ್ವೀಕೃತವಾದ ಪ್ರಸ್ತಾವನೆಗಳನ್ನು ಸಭೆಗೆ ಮಂಡಿಸಲಾಯಿತು. ಸದರಿ ಕೈಗಾರಿಕಾ ಘಟಕಗಳಿಗೆ ಮಂಜೂರಾತಿಗಾಗಿ ಅಗತ್ಯವಾದ ನಿಯಮಾವಳಿ ಪೂರೈಕೆಗೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದರು.
ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ ಸಭೆಗೆ ವಿಷಯ ಮಂಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಆರ್., ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶಾಖಾ ವ್ಯವಸ್ಥಾಪಕರು, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ನಬಾರ್ಡ್ ಡಿ.ಜಿ.ಎಂ., ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ರಾಣೇಬೆನ್ನೂರ ಪೌರಾಯುಕ್ತರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net