

ಹಾವೇರಿ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಈಗಾಗಲೇ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಮುಂಗಾರು ಮಳೆಯೂ ಈ ಬಾರಿ ಫಲದಾಯಕವಾಗುವ ನಿರೀಕ್ಷೆ ಇದೆ. ಕೃಷಿ ಇಲಾಖೆ ರಿಯಾಯ್ತಿ ದರದಲ್ಲಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಸಜ್ಜಾಗಿದೆ. ಹಾಗಾಗಿ, ರೈತರ ಮುಖದಲ್ಲಿ ಸಂತಸ ಮೂಡಿದ್ದು, ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದೆ.
ಮಳೆ ಬಿರುಸುಗೊಳ್ಳುತ್ತಿದ್ದಂತೆ ರೈತರು ತಮ್ಮ ಕೃಷಿ ಭೂಮಿ ಹದಗೊಳಿಸಲು ಮುಂದಾಗಿದ್ದಾರೆ. ರಂಟೆ-ಕುಂಟೆ, ರೂಟಾವೇಟರ್, ಎತ್ತುಗಳ ಮೂಲಕ ನೇಗಿಲು ಹೊಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿವರ್ಷ ಅಂದಾಜು 800 ಮಿಮೀ ವಾಡಿಕೆ ಮಳೆಯಾಗುತ್ತದೆ. 2025ರ ಜನವರಿಯಿಂದ ಮೇ 17ರ ಅಂತ್ಯದವರೆಗೆ 84.5 ಮಿ.ಮಿ ವಾಡಿಕೆ ಮಳೆಯಾಗಬೇಕಿದ್ದು, ಪ್ರಸ್ತುತ 100.3 ಮಿ.ಮಿ ಮಳೆ ಸುರಿದಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 3,27,477 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈ ಪೈಕಿ ಗೋವಿನಜೋಳ 2,05,838 ಹೆಕ್ಟೇರ್, ಹತ್ತಿ 45,780 ಹೆಕ್ಟೇರ್, ಭತ್ತ 33,715 ಹೆಕ್ಟೇರ್, ಶೇಂಗಾ 19,200 ಹೆಕ್ಟೇರ್, ಸೋಯಾಬಿನ್ 12,031 ಹೆಕ್ಟೇರ್, ತೊಗರಿ 250 ಹೆಕ್ಟೇರ್, ಇತರೆ 10,096 ಹೆಕ್ಟೇರ್, ಹೆಸರು 567 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಹೊಂದಿದೆ.
42 ಬೀಜ ಮಾರಾಟ ಕೇಂದ್ರ :
ಜಿಲ್ಲೆಯಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ರಿಯಾಯ್ತಿ ದರದ ಬಿತ್ತನೆ ಬೀಜಗಳನ್ನು ಪೂರೈಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳು, 16 ಇಲಾಖಾ ಹೆಚ್ಚುವರಿ ಕೇಂದ್ರಗಳು, 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ 2 ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಒಟ್ಟು 42 ಬೀಜ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳ ಅಭಾವದ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂಬ ಸಲಹೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.
ತನಿಖಾ ತಂಡ ರಚನೆ, 81 ನೋಟಿಸ್
ಜಿಲ್ಲೆಯಲ್ಲಿ ಗುಣನಿಯಂತ್ರಣ ಹಾಗೂ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಗಳನ್ನು ರಚಿಸಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣ ಹಾಗೂ ಬೆಲೆ ನಿಯಂತ್ರಣ ಮಾಡುವಂತೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 265 ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, 81 ಮಾರಾಟಗಾರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಮಾರಾಟಗಾರರು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ರಸಗೊಬ್ಬರದ ಜತೆಗೆ ಲಘು ಪೋಷಕಾಂಶಕಗಳನ್ನು ಲಿಂಕ್ ಮಾಡಬಾರದಂತೆ ಸೂಚಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕೆ ಮಲ್ಲಿಕಾರ್ಜುನ ವಿವರಿಸಿದ್ದಾರೆ.
ಕೋಟ್:
ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಿಯಾಯ್ತಿ ದರದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸುವ ರೈತರಿಗೆ ಮಾರಾಟಗಾರರು ಕಡ್ಡಾಯವಾಗಿ ರಸೀದಿ ನೀಡಬೇಕು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು. ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರ ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿ ರದ್ದುಗೊಳಿಸಿ, ಕಾನೂನು ಕ್ರಮ ಜರುಗಿಸಲಾಗುವುದು.
> ಡಾ.ಕೆ ಮಲ್ಲಿಕಾರ್ಜುನ, ಜಂಟಿ ಕೃಷಿ ನಿರ್ದೇಶಕ
ಮುಂಗಾರು ಹಂಗಾಮಿನ ಬಿತ್ತನೆ ಬೀಜದ ಬೇಡಿಕೆ
ಪ್ರಮುಖ ಬೆಳೆ ಬೇಡಿಕೆ (ಕ್ವಿಂಟಲ್) ದಾಸ್ತಾನು (ಕ್ವಿಂಟಲ್)
ಗೋವಿನಜೋಳ 6,300 10,500
ಭತ್ತ 3,578.5 4,380
ಶೇಂಗಾ 1,400 1,650
ಸೋಯಾಬೀನ 9,450 11,200
ತೊಗರಿ 675 0.0
ಜೋಳ 10 0.0
ಹೆಸರು 332 0.0
ಒಟ್ಟು 21,745.5 27,730