ಹಾವೇರಿ: ಮಳೆಯಾಶ್ರಿತ ಕೃಷಿಯನ್ನು ಸುಸ್ತಿರ ಕೃಷಿಯಾಗಿ ರೂಪಾಂತರಗೊಳಿಸಿ ಸಮರ್ಪಕವಾಗಿ ಮಳೆಯ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ನೀರು ಒದಗಿಸಿ ಕೃಷಿ ಉತ್ಪಾದಕತೆ ಹಾಗೂ ಆದಾಯ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ನೀರು ಇಂಗದಂತೆ ತಡೆಯಲು ಕೃಷಿ ಹೊಂಡಕ್ಕೆ ಪಾಲಿಥೀನ್ ಹೊದಿಕೆ, ಸುರಕ್ಷತೆಗಾಗಿ ಕೃಷಿ ಹೊಂಡದ ಸುತ್ತಲು ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡಿಸೇಲ್ ಪಂಪಸೆಟ್ ಬಳಕೆ ಹಾಗೂ ಬೆಳೆಗಳಿಗೆ ನೀರು ಹಾಯಿಸಲು ಸ್ಪ್ರಿಂಕ್ಲರ್ ಘಟಕ ಹೀಗೆ ಒಟ್ಟು 6 ಘಟಕಗಳನ್ನು ಕೃಷಿ ಭಾಗ್ಯ ಪ್ಯಾಕೆಜ್‌ನಲ್ಲಿ ರೈತರು ಅಳವಡಿಸಿಕೊಳ್ಳಬಹುದಾಗಿದೆ.
ಸಾಮಾನ್ಯ ವರ್ಗದ ರೈತರಿಗೆ ಶೇ.40ರಿಂದ ಶೇ.90ರವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.50 ರಿಂದ ಶೇ.90ರವರೆಗೆ ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ನಿಡಿಬಹುದಾಗಿರುತ್ತದೆ. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ ನಿಯಮಾನುಸಾರ ಪಲಾನುಭವಿಗಳನ್ನು ಆಯ್ಕೆಮಾಡಲಾಗುವುದು. ಅರ್ಜಿಗಳನ್ನು ಜೇಷ್ಠತೆಯ ಅನುಸಾರ ಇಲಾಖೆಯ ಕೆ-ಕಿಸಾನ್ ತಂತ್ರಾಂಶದಲ್ಲಿ ನೊಂದಣಿ ಮಾಡಲಾಗುವುದು.
ರೈತರ ಒಟ್ಟು ಹಿಡುವಳಿ ಕ್ಷೇತ್ರದ 1 ಸರ್ವೇ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಈ ಹಿಂದೆ ಕೃಷಿ ಭಾಗ್ಯ ಹಾಗೂ ವಿವಿದ ಯೋಜನೆಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲಿ ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ. ಕೆ.ಕಿಸಾನ್ ತಂತ್ರಾಂಶದಲ್ಲಿ ನೊಂದಾಯಿಸಿದ ಅರ್ಹ ಅರ್ಜಿಗಳನ್ನು ಆಯ್ಕೆ ಮಾಡಿ ಕ್ಷೇತ್ರ ಪರಿಶೀಲನೆ ಕೈಗೊಂಡು ಅರ್ಹ ರೈತರಿಗೆ ತಂತ್ರಾಂಶದ ಮೂಲಕವೆ ಕಾರ್ಯಾದೇಶವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದೆಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.