ಮಳೆ ಕಡಿಮೆ ಹಿನ್ನೆಲೆ ಸದ್ಯಕ್ಕೆ ಬಿತ್ತನೆ ಬೇಡ; ರೈತರಿಗೆ ಕೃಷಿ ಇಲಾಖೆ ಸಲಹೆ

Former
Published on

ಹಾವೇರಿ: ಜಿಲ್ಲೆಯಲ್ಲಿ 3,30,447 ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 3,22,871 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂದಿನ 8ರಿಂದ 10 ದಿನಗಳವರೆಗೆ ಹವಾಮಾನ ಮುನ್ಸೂಚನೆ ಪ್ರಕಾರ ಮಳೆಯ ಸಾಧ್ಯತೆ ಕಡಿಮೆ ಇದೆ. ಮಳೆ ಬೀಳುವವರೆಗೆ ರೈತರು ಯಾವುದೇ ಬಿತ್ತನೆಯನ್ನು ಕೈಗೊಳ್ಳದಿರುವಂತೆ ರೈತರಿಗೆ ಕೃಷಿ ಇಲಾಖೆ ಸಲಹೆ ನೀಡಿದೆ.
ಬೆಳೆಗಳಲ್ಲಿ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಡುವ ಕಾರ್ಯ ಮುಂದುವರೆದಿದೆ. ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೆ ಬೆಳೆಗಳಿಗೆ ರಸಗೊಬ್ಬರ ಹಾಕಬಾರದು. ಅವಶ್ಯವಿದ್ದಲ್ಲಿ ಬೆಳೆಗಳಲ್ಲಿ ಅಂತರ ಬೇಸಾಯ ಮಾಡಿ ಕಳೆ ತೆಗೆದ ನಂತರ ಭೂಮಿಯ ತೇವಾಂಶವನ್ನು ಪರಿಶೀಲಿಸಿ, ಬೆಳೆಗಳಿಗೆ ತುಂತುರು ನೀರಾವರಿ ಮೂಲಕ ನೀರು ಕೊಡಬಹುದು.
ಗೋವಿನ ಜೋಳದಲ್ಲಿ ಎಲೆ ಹಳದಿಯಾಗಿ ಕಂಡುಬಂದಲ್ಲಿ 19:19:19 ಅಥವಾ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂನಂತೆ ಕರಗಿಸಿ ಸಿಂಪಡಿಸಬೇಕು. ಕಾಂಡಕೊರಕ ಮತ್ತು ಸೈನಿಕ ಹುಳುವಿನ ಹತೋಟಿಗಾಗಿ 1.5 ಮಿ.ಲೀ ಡೈಮಿತೋಯೆಟ್ 30 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಇಮಾಮೆಕ್ಟಿನ ಬೆಂಝೋಯೆಟ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಹೋಗುವ ಹಾಗೆ ಸಿಂಪರಣೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆ ಮೂಲಕ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net