ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಲಭ್ಯ; ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

Former
Published on

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೆಳೆಗಳಿಗೆ ಗೊಬ್ಬರ ನೀಡುವ ಕಾರ್ಯ ಮುಂದುವರೆದಿದೆ. ಜಿಲ್ಲೆಯ ರೈತರಿಗೆ ಅಗತ್ಯವಿರುವ ಯೂರಿಯಾ ರಸಗೊಬ್ಬರದ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಗೆ ಆಗಸ್ಟ್ ಮೊದಲ ವಾರದ ಅಂತ್ಯದವರೆಗೆ 35,000 ಟನ್ ಯೂರಿಯಾ ರಸಗೊಬ್ಬರ ಸರಬರಾಜಾಗಬೇಕಾಗಿತ್ತು. ಈವರೆಗೆ 38,113 ಟನ್ ಸರಬರಾಜಾಗಿದೆ. ಹಳೆಯ ದಾಸ್ತಾನು ಸೇರಿ ಸದ್ಯ ಒಟ್ಟಾರೆ 56,076 ಟನ್ ಲಭ್ಯವಿದೆ. ಈವರೆಗೆ 45,649 ಟನ್ ವಿತರಣೆಯಾಗಿದ್ದು, 9,949 ಟನ್ ಉಳಿಕೆ ದಾಸ್ತಾನು ವಿತರಣೆಗೆ ಲಭ್ಯವಿದೆ ಎಂದಿದ್ದಾರೆ.
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ದರ ಪಟ್ಟಿಯನ್ನು ಮಾರಾಟ ಮಳಿಗೆಯಲ್ಲಿ ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು ಅಥವಾ ಇತರೆ ಉತ್ಪನ್ನಗಳನ್ನು ಲಿಂಕ್ ಮಾಡುವುದು, ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂಥವರ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳೆ ಸಂರಕ್ಷಣೆ ವಿಧಾನ :
ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ.0.5ರ 19:19:19 ಅಥವಾ 13:0:45 (5 ಗ್ರಾಂ ಪ್ರತಿ ಲೀ. ನೀರಿಗೆ) ಮತ್ತು ಶೇ. 0.25 ರ ಸತುವಿನ ಸಲ್ಪೇಟ್ ದ್ರಾವಣವನ್ನು (2.5 ಗ್ರಾಂ ಪ್ರತಿ ಲೀ. ನೀರಿಗೆ) ಹಾಕಿ ಎರಡು ಸಲ ಅಂದರೆ 15 ದಿವಸದ ಅಂತರದಲ್ಲಿ ಸಿಂಪಡಿಸಬೇಕು. ಪ್ರತಿ ಲೀಟರ್ ನೀರಿಗೆ 5 ಗ್ರಾಂ ಸಿಂಪರಣೆ ಕೈಗೊಳ್ಳುವುದು. ಎಲೆ ಸುರುಳಿ ಪೂಚಿ ಕೀಟದ ನಿರ್ವಹಣೆಗಾಗಿ 2 ಮಿ.ಲೀ ಪ್ರೋಪೆನೋಫಾಸ್ 50 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು .
ಹತ್ತಿ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಪೂರೈಸಲು 19:19:19 ಅಥವಾ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ 30-35 ದಿನದ ಬೆಳೆಗೆ, 10 ಗ್ರಾಂ ನಂತೆ 45-60 ದಿನದ ಬೆಳೆಗೆ ಸಿಂಪರಣೆ ಕೈಗೊಳ್ಳಬೇಕು.
ಸೋಯಾಅವರೆ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಪೂರೈಸಲು ಶೇ. 1.0 ರ 13:0:45 ಅಥವಾ ಯೂರಿಯಾ ಸಿಂಪರಣೆ ಕೈಗೊಳ್ಳಬೇಕು. ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕಾಗಿ ಪ್ರೋಪೆನೋಪೋಸ್ 2 ಮಿ.ಲೀ ಅಥವಾ ಕ್ವಿನಾಲ್ವೋಸ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಜೆಡಿ ಮಂಜುನಾಥ ಸಲಹೆ ನೀಡಿದ್ದಾರೆ.
ಹೆಚ್ಚು ಬಳಸಬೇಡಿ :
ಬೆಳೆಗಳಿಗೆ ಹೆಚ್ಚು ಯೂರಿಯಾ ಬಳಸಿದಲ್ಲಿ ಬೆಳೆ ಹೆಚ್ಚು ರಸವತ್ತಾಗಿ, ಮೆತ್ತಗಾಗಿ ಕೀಟ ಮತ್ತು ರೋಗದ ಬಾಧೆ ಹೆಚ್ಚಾಗುವ ಸಂಭವವಿದೆ. ಹಾಗಾಗಿ, ರೈತರು ಯೂರಿಯಾವನ್ನು ಅವಶ್ಯಕತೆಗೆ ತಕ್ಕಂತೆ ಬಳಸಲು ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net