ಸೈನಿಕ ಹುಳುಬಾಧೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಸಲಹೆ; ಗೋವಿನಜೋಳ, ಸೋಯಾಬಿನ್ ಬೆಳೆ ರಕ್ಷಣೆಗೆ ಸೂಚನೆ

Published on

ಹಾವೇರಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಖ್ಯವಾಗಿ ಗೋವಿನಜೋಳ ಹಾಗೂ ಸೋಯಾಬಿನ್ ಬೆಳೆಗಳ ಮೇಲೆ ಸೈನಿಕ ಹುಳುವಿನ ಬಾಧೆ ಕಂಡುಬಂದಿರುತ್ತಿದೆ ಈ ಕೀಟ ಬಾಧೆ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಕ ಮಂಜುನಾಥ ಅಂತರವಳ್ಳಿ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೈನಿಕ ಹುಳುಗಳನ್ನು ಸ್ಥಳೀಯವಾಗಿ ಲದ್ದಿ ಹುಳು ಎಂದು ಕರೆಯುತ್ತಾರೆ. ಹುಳು ಸಣ್ಣಗೆ, ನಯವಾಗಿ ಕಳೆಗುಂದಿದ ಹಸಿರು ಬಣ್ಣದಿಂದ ಕೂಡಿದ್ದು, ಮೈಮೇಲೆ ಅಡ್ಡಗೆರೆಗಳು ಇರುತ್ತವೆ. ಸುಮಾರು 1.5 ಇಂಚು ಉದ್ದವಿರುತ್ತದೆ. ಹಗಲು ವೇಳೆ ಗರಿಗಳ ಬುಡದಲ್ಲಿ ಮತ್ತು ಮಣ್ಣಿನಲ್ಲಿ ಅಡಗಿಕೊಂಡಿದ್ದು, ರಾತ್ರಿ ವೇಳೆ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ. ತಂಪಾದ ವಾತಾವರಣ ಹೆಚ್ಚಿನ ಕಾಲ ಇದ್ದಲ್ಲಿ ಕೀಟದ ಭಾಧೆ ಉಲ್ಬಣಗೊಳ್ಳುತ್ತದೆ.
ಸೈನಿಕ ಹುಳುವಿನ ನಿರ್ವಹಣಾ ಕ್ರಮಗಳು: ಸೈನಿಕ ಹುಳುಗಳ ನಿಯಂತ್ರಣವನ್ನು ಇಮಾಮೆಕ್ಟಿನ್ ಬೆಂಝೋಯೇಟ್ 0.2 ಗ್ರಾಂ ಅಥವಾ 0.4 ಮಿ.ಲೀ ಕ್ಲೋರಾಂಟ್ರಿನಿಲಿಪ್ರೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಂಜೆ ವೇಳೆ ಸಿಂಪಡಿಸಬೇಕು. ಇದಲ್ಲದೆ ಕಳಿತ ವಿಷಪಾಶಾಣ ಬಳಕೆಯಿಂದ ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ.
ಹೊಲದ ಸುತ್ತಲೂ ಬೋದು ಹರಿ ತೆಗೆದು, ಅದರಲ್ಲಿ ಫೆನ್ವೆಲರೇಟ್ 0.4 ಅಥವಾ ಮ್ಯಾಲಥಿಯಾನ್ ಹುಡಿ ಹಾಕಿ ಕೀಟ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗುವುದನ್ನು ತಪ್ಪಿಸಬಹುದು ಎಂದು ಜೆಡಿ ಮಂಜುನಾಥ ತಿಳಿಸಿದ್ದಾರೆ.
ಪಾಶಾಣ ತಯಾರಿಸುವುದು ಹೇಗೆ ?
50 ಕೆ.ಜಿ. ಗೋದಿ ಅಥವಾ ಭತ್ತದ ತೌಡು (ಹೊಟ್ಟು) ಮೋನೋಕ್ರೋಟೋಫಾಸ್ 36- 250 ಮಿ.ಲೀ, ಬೆಲ್ಲ 4 ಕೆ.ಜಿ., 5 ರಿಂದ 8 ಲೀ. ನೀರು ತೆಗೆದುಕೊಳ್ಳಬೇಕು. ಮೊದಲು ಬೆಲ್ಲ ಕುಟ್ಟಿ ಸಣ್ಣಗೆ ಪುಡಿ ಮಾಡಿ ನೀರು ಮೋನೋಕ್ರೋಟೋಫಾಸ್ 36 ಸೇರಿಸಿ, ಬೆಲ್ಲ ಪೂರ್ತಿ ಕರಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ 50 ಕೆ.ಜಿ. ತೌಡು ಸೇರಿಸಿ ತಂಬಿಟ್ಟು ಹದಕ್ಕೆ ಕಲಸಿ. ಗಾಳಿಯಾಡದ ಚೀಲದಲ್ಲಿ ಅಥವಾ ಡ್ರಮ್ಮಿನಲ್ಲಿ 24 ಗಂಟೆಗಳ ಕಾಲ ಕಳಿಯಲು ಬಿಡಿ. ಈ ರೀತಿ ತಯಾರಿಸಿದ ವಿಷ ಆಹಾರವನ್ನು ಸಂಜೆ 4 ಗಂಟೆ ನಂತರ ಪ್ರತಿ ಹೆಕ್ಟರ್‌ಗೆ 50 ಕೆ.ಜಿ.ಯಂತೆ ಪಾಶಾಣವನ್ನು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net