ಮಣ್ಣಿನ ಗುಣಮಟ್ಟ ಕಾಯ್ದುಕೊಂಡ ರೈತರಿಗೆ ನಮನ; ರೈತ ದಿನಾಚರಣೆ ಸಮಾರಂಭದಲ್ಲಿ ಕೃಷಿ ಇಲಾಖೆ ಜೆಡಿ ಡಾ.ಕೆ.ಮಲ್ಲಿಕಾರ್ಜುನ ಹೇಳಿಕೆ

23 HVR 6
Published on

ಹಾವೇರಿ: ರಸಾಯನಿಕ ಗೊಬ್ಬರ ಮತ್ತಿತರ ಆಧುನಿಕ ಕೃಷಿ ಪದ್ಧತಿಯ ನಡುವೆಯೂ ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಗುಣಮಟ್ಟದ ಆಹಾರ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಶ್ಲಾಘನೀಯ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ನಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ಎಲ್ಲ ಉದ್ದಿಮೆಗಳು ಸ್ಥಗಿತಗೊಂಡ ಸಂದರ್ಭದಲ್ಲೂ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಹೊಂದಲು ಕಾರಣೀಕರ್ತರಾದ ರೈತರಿಗೆ ನಮನಗಳು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್. ಮಾತನಾಡಿ, ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ ಸಿಂಗ್ ಅವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು. ಜೈ ಜವಾನ ಜೈ ಕಿಸಾನ ಎಂಬ ಪ್ರಸಿದ್ಧ ಘೋಷಣೆಯನ್ನು ಅವರು ಅನುಸರಿಸಿದರು. ನಮ್ಮ ದೇಶದ ರೈತರು ಮಾಡುತ್ತಿರುವ ಮಹತ್ತರ ಕೆಲಸಗಳನ್ನು ಗೌರವಿಸಲು ಚೌಧರಿ ಚರಣ ಸಿಂಗ್ ರವರ ಜನ್ಮದಿನವಾದ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತರ ದಿನಾಚರಣೆ ಅಥವಾ ಕಿಸಾನ್ ದಿವಸ್ ವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಜೈಕಿಸಾನ್ ಕಂಪನಿಯ ಪ್ರತಿನಿಧಿ ಶರತ ಮೈದೂರ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ರಸಗೊಬ್ಬರಗಳ ಸಮರ್ಪಕ ಬಳಕೆ ಕುರಿತು ಉಪನ್ಯಾಸ ನೀಡಿದರು. ರೈತ ಸಂಘಟನೆಯ ಸುರೇಶ ಚಲವಾದಿ ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ಅವರ ಜೀವನ ಚರಿತ್ರೆ ಕುರಿತು ಮಾಹಿತಿ ನೀಡಿದರು.

ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸಾವಯವ ಕೃಷಿ, ಸಹಜ ಕೃಷಿ ಪದ್ದತಿಗಳತ್ತ ರೈತರು ಒಲವು ತೋರಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ರೈತರಾದ ಭುವನೇಶ್ವರ ಶಿಡ್ಲಾಪುರ, ಶಿವಬಸಪ್ಪ ಗೋವಿ, ಡಿಳ್ಳೆಪ್ಪ ಮಣ್ಣೂರ, ಶಿವನಗೌಡ ಗಾಜಿಗೌಡ್ರ, ಮಂಜು ಕದಮ, ಶಿವಯೋಗಿ ಹೊಸಗೌಡ್ರ, ರಾಜೇಸಾಬ ತರ್ಲಘಟ್ಟ, ಬಸವರಾಜ.ಡಿ, ತಾಲ್ಲೂಕು ಕೃಷಿಕ ಸಮಾಜ, ಜೈಕಿಸಾನ್ ಎಂ.ಸಿ.ಎಫ್ ಕಂಪನಿ ಪ್ರತಿನಿಧಿಗಳು ಮತ್ತು ವಿವಿಧ ರೈತ ಸಂಘಟನೆಗಳು, ತಾಲೂಕಿನ ಕೃಷಿ ಸಖಿ, ಪಶು ಸಖಿಯರು, ಹಾವೇರಿ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ, ಇತರರಿದ್ದರು.

ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ಎಸ್.ಕೆ ವಂದಿಸಿದರು.

ಸಾಧಕ ಅನ್ನದಾತರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆ ತೋರಿದ ಕಬ್ಬೂರ ಗ್ರಾಮದ ಬಸಪ್ಪ ಹೊಸಳ್ಳಿ, ಕೋಣನತಂಬಿಗೆ ಗ್ರಾಮದ ಬೀರಪ್ಪ ರಿತ್ತಿಕುರುಬರ, ಕರ್ಜಗಿ ಗ್ರಾಮದ ಚನ್ನಬಸಪ್ಪ ಸುಳ್ಳಳ್ಳಿ, ಬೆನಕನಹಳ್ಳಿ ಗ್ರಾಮದ ದೇವಲಪ್ಪ ಲಮಾಣಿ, ಕೆರಿಕೊಪ್ಪ ಗ್ರಾಮ ಹನುಮಂತಪ್ಪ ತಳವಾರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net