ಸೈನಿಕ ಹುಳು ಭಾದೆ ಸಮಗ್ರ ನಿರ್ವಹಣೆಗೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಸಲಹೆ

Published on

ಹಾವೇರಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಖ್ಯವಾಗಿ ಗೋವಿನಜೋಳ ಬೆಳೆಯ ಮೇಲೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ. ಈ ಹುಳು ಭಾದೆ ಸಮಗ್ರ ನಿರ್ವಹಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಸೈನಿಕ ಹುಳುವನ್ನು ವೈಜ್ಞಾನಿಕವಾಗಿ ಮೈಥಿನ್ನು ಸಪರೇಟ ಎಂದು ಹಾಗೂ ಸ್ಥಳೀಯವಾಗಿ ಲದ್ದಿ ಹುಳು ಎಂದು ಸಹ ಕರೆಯುತ್ತಾರೆ. ಹುಳು ಸಣ್ಣಗೆ, ನಯವಾಗಿ ಕಳೆಕುಂದಿದ ಹಸಿರು ಬಣ್ಣದಿಂದ ಕೂಡಿದ್ದು, ಮೈಮೇಲೆ ಅಡ್ಡಗೆರೆಗಳು ಇದ್ದು ಸುಮಾರು 1.5 ಇಂಚು ಉದ್ದವಿರುತ್ತದೆ. ಸಾವಿರಾರು ಸಂಖ್ಯೆಗಳಲ್ಲಿ ಪತಂಗಗಳು ನೂರಾರು ಕಿ.ಮೀ ದೂರದಿಂದ ಆಹಾರ ಹುಡುಕುತ್ತ ಹೋಗಿ ಬೆಳೆಯಿದ್ದ ಜಾಗದಲ್ಲಿ ಭೂಸ್ಪರ್ಶ ಮಾಡಿ ಮೊಟ್ಟೆಗಳನ್ನು ಇಡುತ್ತದೆ.
ಫಾಲ್ ಸೈನಿಕ ಹುಳುವಿನ ಮೊದಲ ಹಂತದ ಮರಿಗಳು ಎಲೆಯ ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಹಾನಿಗೊಳಗಾದ ಎಲೆಗಳ ಮೇಲೆ ಉದ್ದವಾದ ಪಾರದರ್ಶಕ ಮಚ್ಚೆಗಳು ಉಂಟಾಗುತ್ತದೆ. ಕೊನೆಯ ಹಂತದ ಮರಿಹುಳು ಮೆಕ್ಕೆಜೋಳದ ಸುಳಿಯಲ್ಲಿ ಅವತಿಕೊಂಡು ಬೆಳೆಯುವ ಭಾಗವನ್ನು ಕಡಿದು ತಿನ್ನುತ್ತದೆ. ಭಾದೆಗೊಳಗಾದ ಎಲೆಗಳ ಮೇಲೆ ರಂದ್ರಗಳಾಗುತ್ತದೆ ಸಸ್ಯದ ಕುಡಿಯಲ್ಲಿ ಮರಿಹುಳುವಿನ ಹಿಕ್ಕೆಯನ್ನು ಕಾಣಬಹುದು. ಹಾನಿಗೊಳಗಾದ ಸಸ್ಯಗಳ ಬೆಳವಣಿಗೆ ತೀರ್ವವಾಗಿ ಕುಂಠಿತಗೊಳ್ಳುತ್ತದೆ. ಹಗಲು ವೇಳೆ ಗರಿಗಳ ಬುಡದಲ್ಲಿ ಮತ್ತು ಮಣ್ಣಿನಲ್ಲಿ ಅಡಗಿಕೊಂಡು ರಾತ್ರಿ ವೇಳೆ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ ಹಾಗೂ ಎಲೆಗಳನ್ನು ಸಂಪೂರ್ಣವಾಗಿ ತಿಂದು ಬೋಳಾಗಿಸುತ್ತವೆ. ಇತ್ತೀಚಿಗೆ ಆಗಾಗ್ಗೆ ಬರುತ್ತಿರುವ ಮಳೆ ಮತ್ತು ತಂಪಾದ ವಾತಾವರಣವಿರುವುದರಿಂದ ಕೀಟದ ಭಾಧೆ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಮಗ್ರ ನಿರ್ವಹಣಾ ಕ್ರಮಗಳು:
ಫಾಲ್ ಸೈನಿಕ ಹುಳುವಿನ ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 4ರಂತೆ ಅಳವಡಿಸಿ ಪ್ರೌಢ ಕೀಟದ ಚಟುವಟಿಕೆ ಗಮನಿಸಬೇಕು. ಕೀಟನಾಶಕ ಎಮಾಮೆಕ್ಟನ್ ಬೆಂಜೋಯೆಟ್ 5. ಎಸ್ ಜಿ (0.4 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ಕ್ಲೋರಾಂಟ್ರನಿಲಿಪ್ರೋಲ್ 18.5 ಎಸ್ ಸಿ (0.4 ಮಿ ಲೀಟರ್ ಪ್ರತಿ ಲೀ ನೀರಿಗೆ) ಸುಳಿಯ ಭಾಗಕ್ಕೆ ತಲುಪುವಂತೆ ಸಿಂಪರಣೆ ಮಾಡಬೇಕು. ಲಭ್ಯವಿದ್ದಲ್ಲಿ ಮೊಟ್ಟೆಯ ಪರತಂತ್ರ ಕೀಟಗಳಾದ ಪ್ರಿಟಿಯೋಸಮ್ ಅನ್ನು ಪ್ರತಿ ಎಕರೆಗೆ 50,000 ಮೊಟ್ಟೆಗಳನ್ನು 15 ದಿನಗಳ ಅಂತರದಲ್ಲಿ 2 ಬಾರಿ ಬಿಡಬೇಕು. ಬೆಳೆಯ ಮೇಲೆ ಮೊಟ್ಟೆಯ ಗುಂಪುಗಳು ಕಂಡುಬಂದಾಗ ಸಂಗ್ರಹಿಸಿ ಕೊಲ್ಲಬೇಕು. ಬೇವಿನ ಬೀಜದ ಕಷಾಯ (ಶೇ.3) ಅಥವಾ ಅಜಾಡಿರಕ್ಟಿನ್ 10,000 ಪಿ.ಪಿ.ಎಂ (2 ಮಿ.ಲೀ. ಪ್ರತಿ ಲೀಟರ್ ನೀರಿಗೆ) ಬೆರೆಸಿ ಸುಳಿಯ ಭಾಗಕ್ಕೆ ಸಿಂಪರಣೆ ಮಾಡಬೇಕು ಹಾಗೂ ಜೈವಿಕ ಕೀಟನಾಶಕಗಳಾದ ಮೆಟಾರೈಜಿಯಂ ಮ್ರಿಲೇಯಿ (2 ಗ್ರಾಮ ಪ್ರತಿ ಲೀ ನೀರಿಗೆ) ಅಥವಾ ಬ್ಯಾಸಿಲಸ್ಥುರಿಂಜಿಯಸ್ಸಸ್ (2 ಮಿ.ಲೀ ಪ್ರತಿ ಲೀಟರ್ ನೀರಿಗೆ )ಗಳನ್ನು ಸಿಂಪರಿಸಬೇಕು ಎಂದು ಜೆಡಿ ಮಂಜುನಾಥ ಅಂತರವಳ್ಳಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net