ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳ ವಿತರಣೆ

23 HVR 5
Published on

ಹಾವೇರಿ: ತಾಲೂಕಿನ ಹಾವೇರಿ, ಕರ್ಜಗಿ ಹಾಗೂ ಗುತ್ತಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬಿತ್ತನೆ ಬೀಜಗಳಾದ ಶೇಂಗಾ, ಸೋಯಾಅವರೆ, ತೊಗರಿ, ಹೆಸರು, ಗೋವಿನಜೋಳ, ಭತ್ತ ಹಾಗೂ ಇನ್ನಿತರ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದರು.
ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ತಮ್ಮ ರೈತ ನೊಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯೊಂದಿಗೆ ತಮ್ಮ ಜಮೀನಿನ ಉತಾರ ನೀಡಿ, ತಮ್ಮ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಟ 5 ಎಕರೆವರೆಗೆ ಬಿತ್ತನೆ ಬೀಜ ಖರೀದಿಸಬಹುದು. ಬಿತ್ತನೆ ಬೀಜಗಳ ಪ್ಯಾಕೆಟ್‌ಗಳಿಗೆ ಕೋಡ್ ಅಳವಡಿಸಲಾಗಿದ್ದು, ಅವುಗಳನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ಅಧಿಕೃತ ಪರವಾನಿಗೆ ಹೊಂದಿದ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದಾಗಿರುತ್ತದೆ. ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಉಪಕರಣದ ಮೂಲಕ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ರೈತರು ಕೇವಲ ಒಂದೇ ಬಗೆಯ ರಸಗೊಬ್ಬರಕ್ಕೆ ಅವಲಂಬಿತರಾಗದೇ ಗಂಧಕ ಹಾಗೂ ಪೊಟ್ಯಾಷ್ ಅಂಶಗಳಿರುವ 20:20:0:13, 10:26:26 ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶಗಳ ಸಮಗ್ರ ನಿರ್ವಹಣೆ ಸಾಧ್ಯ ಎಂದು ವಿವರಿಸಿದರು.
ಪ್ರಸ್ತುತ ಮುಂಗಾರಿನಲ್ಲಿ ತಾಲೂಕಿನಲ್ಲಿ ಈ ವರೆಗೆ 101 ಮಿ.ಮಿ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯ ನಡೆಸಿದ್ದು, ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ಖರೀದಿಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಪ್ರಮುಖ ಬೆಳೆಗಳಾದ ಗೋವಿನಜೋಳ ಸುಮಾರು 39,120 ಹೆಕ್ಟರ್, ಸೊಯಾಅವರೆ 3,145 ಹೆಕ್ಟರ್, ಶೇಂಗಾ 2,862 ಹೆಕ್ಟರ್ ಸೇರಿದಂತೆ ಒಟ್ಟಾರೆ 53,762 ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಕ್ಷೇತ್ರ ಆವರಿಸುವ ಗುರಿ ಹೊಂದಲಾಗಿದೆ ಎಂದರು.
ಹಾವೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸನಗೌಡ ಪಾಟೀಲ, ರೈತರು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net