ಹಾವೇರಿ: ಕೃಷಿ ಭಾಗ್ಯ ಯೋಜನೆ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನಿಸಲಾದೆ. ಈ ಯೋಜನೆಯಡಿ ರೈತರು ಆರು ಘಟಕಗಳನ್ನು ಅನುಷ್ಠಾನಗೊಳಿಸಿಕೊಳ್ಳಬಹುದು. ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಕೃಷಿ ಹೊಂಡಕ್ಕೆ ಪಾಲಿಥಿನ್ ಹೊದಿಕೆ, ಸುರಕ್ಷತೆಗಾಗಿ ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಬಳಕೆ ಹಾಗೂ ಬೆಳೆಗಳಿಗೆ ನೀರು ಹಾಯಿಸಲು ಸ್ಪಿಂಕ್ಲರ್ ಘಟಕಗಳನ್ನು ಕೃಷಿಭಾಗ್ಯ ಪ್ಯಾಕೇಜ್‌ನಲ್ಲಿ ರೈತರು ಅಳವಡಿಸಿಕೊಳ್ಳ ಬಹುದು.
ಸಾಮಾನ್ಯ ವರ್ಗದ ರೈತರಿಗೆ ಶೇ.40ರಿಂದ ಶೇ.90ರವರೆಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.50ರಿಂದ ಶೇ.90ರವರೆಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಏ.22ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.
ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದಲ್ಲಿ ನಿಯಮಾನುಸಾರ ಪಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಜೇಷ್ಠತೆಯ ಅನುಸಾರ ಇಲಾಖೆಯ ಕೆ-ಕಿಸಾನ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುವುದು. ರೈತರ ಒಟ್ಟು ಹಿಡುವಳಿ ಕ್ಷೇತ್ರದ ಒಂದು ಸರ್ವೇ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಈ ಹಿಂದೆ ಕೃಷಿ ಭಾಗ್ಯ ಹಾಗೂ ವಿವಿಧ ಯೋಜನೆಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲಿ ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.