ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ

Published on

ಹಾವೇರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗುವ ಸೂಚನೆಯಿದ್ದು, ಹಾವೇರಿ ತಾಲೂಕಿನ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇಲ್ಲ ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ ಪ್ರಮುಖವಾಗಿ ಮುಸುಕಿನ ಜೋಳ 42,000 ಹೆಕ್ಟರ್, ಸೋಯಾಬೀನ್ 4,100 ಹೆಕ್ಟರ್, ಶೇಂಗಾ 950 ಹೆಕ್ಟೆರ್, ಭತ್ತ 300 ಹೆಕ್ಟರ್, ಹಾಗೂ ಇತರೆ ಬೆಳೆಗಳು ಸೇರಿ ಒಟ್ಟಾರೆ 56,000 ಹೆಕ್ಟರ್ ಬಿತ್ತನೆಯಾಗುವ ಗುರಿ ಹೊಂದಲಾಗಿದೆ. ಅವಶ್ಯಕವಿರುವ ರಸಗೊಬ್ಬರಗಳನ್ನು ಮಾರಾಟ ಪರವಾನಗಿಯನ್ನು ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು, ರೈತ ಉತ್ಪಾದಕ ಕಂಪನಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುಕ ತಾಲೂಕಿನಲ್ಲಿ ಯೂರಿಯಾ 2,552 ಮೆಟ್ರಿಕ್ ಟನ್, ಡಿ.ಎ.ಪಿ 1,250 ಮೆಟ್ರಿಕ್ ಟನ್, ಪೋಟ್ಯಾಷಿಯಂ 5,365 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ರಸಗೊಬ್ಬರ 1,830 ಮೆಟ್ರಿಕ್ ಟನ್‌ಗಳಷ್ಟು ವಿವಿಧ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಇದೆ.
ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಹಾವೇರಿ, ಕರ್ಜಗಿ ಹಾಗೂ ಗುತ್ತಲ ಕೇಂದ್ರಗಳಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಯಾಯ್ತಿ ದರದಲ್ಲಿ ವಿತರಿಸಲಾಗುವ ಬಿತ್ತನೆ ಬೀಜಗಳ ಪ್ಯಾಕೆಟ್‌ಗಳ ಮೇಲೆ ಬಾರ್ ಕೋಡ್ ಅಳವಡಿಸಲಾಗಿದೆ. ಸೂಪರ್ ಮಾರ್ಕೆಟ್ ಮಾದರಿಯಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳ ಪ್ಯಾಕೆಟ್ ಮೇಲಿನ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಕೆ.ಕಿಸಾನ್ ಪೋರ್ಟಲ್‌ನಲ್ಲಿ ಎಂ.ಐ.ಎಸ್ ಮಾಡಿ ಬಿಲ್ ಸೃಜಿಸಲಾಗುವುದು ಹಾಗೂ ರಸೀದಿಯನ್ನು ನೀಡಲಾಗುವುದು.
ಈ ಬಾರಿ ಸ್ಕ್ಯಾನ್ ಮಾಡಿ ವಿತರಿಸುವ ವ್ಯವಸ್ಥೆ ಇರುವುದರಿಂದ ಯಾವುದೇ ಕಾರಣಕ್ಕೂ ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಖರೀದಿಸಲು ಸಾಧ್ಯವಾಗುವುದಿಲ್ಲ. ಖರೀದಿಸಿದ ರೈತರ ಮೊಬೈಲ್‌ಗೆ ತಕ್ಷಣವೇ ಎಸ್.ಎಂ.ಎಸ್ ಸಂದೇಶ ರವಾನೆಯಾಗುತ್ತದೆ. ರೈತರು ತಾವು ಖುದ್ದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಖರೀದಿಸಬೇಕು. ರೈತರು ಕಡ್ಡಾಯವಾಗಿ ಎಫ್‌ಐಡಿ ಸಂಖ್ಯೆಯನ್ನು ಹೊಂದಿರಬೇಕು. ಎಲ್ಲ ವರ್ಗದ ರೈತರಿಗೆ ಗರಿಷ್ಠ ಎರಡು ಹೆಕ್ಟರ್‌ವರೆಗೆ ಮಾತ್ರ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಬಿತ್ತನೆಗೆ ಸೂಚನೆಗಳು:
ಬಿತ್ತುವ ಮುನ್ನ ಬೀಜಗಳನ್ನು ಕ್ಲೋರ್ ಪೈರಿಫಾಸ್ ಮತ್ತು ರ್ಕಾಂಡೈಜಿಂ ಅಥವಾ ಅಜಾಡಿರಕ್ಟನ್ ಮತ್ತು ಟ್ರೈಕೋಡಮಾಕಗಳಿಂದ ಬೀಜೋಪಚರಿಸಬೇಕು. ಶೇಂಗಾ, ಸೂರ್ಯಕಾಂತಿ, ಹತ್ತಿ, ಹೆಸರು, ಅಲಸಂದಿ ಇತ್ಯಾದಿ ಬೆಳೆಗಳ ಸುತ್ತ ನಾಲ್ಕು ಸಾಲು ಗೋವಿನಜೋಳ ಬಿತ್ತನೆ ಮಾಡಬೇಕು.
ಹತ್ತಿ ಬಿತ್ತುವವರು ಜೂನ್ ಮೊದಲ ವಾರ (ರೋಹಿಣಿ ಮಳೆ)ದೊಳಗೆ ಬಿತ್ತನೆ ಮಾಡಲೇಬೇಕು. ನಂತರ ಬಿತ್ತನೆ ಮಾಡಿದರೆ ಇಳುವರಿ ತುಂಬ ಕಡಿಮೆಯಾಗುತ್ತದೆ. ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ ಇರುವುದರಿಂದ ರಸಗೊಬ್ಬರಗಳನ್ನು ಮಿತವಾಗಿ ಬಳಸಬೇಕು. ಪೋಷಕಾಂಶಗಳ ಸಿಂಪರಣೆ ಅನಿವಾರ್ಯವಾಗಿದ್ದು, ಈ ಕಾರ್ಯವನ್ನು ಬೆಳೆಯು 20ರಿಂದ 25 ದಿನಗಳು ಇರುವಾಗಲೇ ಆರಭಿಸಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net